ದೆಹಲಿ: ಇನ್ನು ಮುಂದೆ 4 ತಿಂಗಳು ಮುಂಚಿತವಾಗಿ ರೈಲ್ವೇ ಟಿಕೆಟ್ ಬುಕ್ (Ticket Booking) ಮಾಡಲು ಸಾಧ್ಯವಿಲ್ಲ. ಭಾರತೀಯ ರೈಲ್ವೇ (Indian Railways) ಬುಕ್ಕಿಂಗ್ಗಾಗಿ ಮುಂಗಡ ಕಾಯ್ದಿರಿಸುವಿಕೆಯ ಅವಧಿಯನ್ನು 120 ದಿನಗಳಿಂದ 60 ದಿನಗಳಿಗೆ ಕಡಿತಗೊಳಿಸಿದೆ.
ಹೊಸ ಬದಲಾವಣೆ ನ.1 ರಿಂದ ಜಾರಿಯಾಗಲಿದೆ. ಅಕ್ಟೋಬರ್ 31 ರ ಮೊದಲು 120 ದಿನಗಳ ಬುಕ್ಕಿಂಗ್ ಮಾನ್ಯವಾಗಿರುತ್ತದೆ ಎಂದು ರೈಲ್ವೇ ಸ್ಪಷ್ಟಪಡಿಸಿದೆ.
ಅಧಿಕೃತ ಸೂಚನೆಯ ಪ್ರಕಾರ, ಪರಿಷ್ಕೃತ ಬದಲಾವಣೆಗಳು ವಿಭಿನ್ನ ಮುಂಗಡ ಕಾಯ್ದಿರಿಸುವಿಕೆಯ ಮಿತಿಗಳನ್ನು ಹೊಂದಿರುವ ತಾಜ್ ಎಕ್ಸ್ಪ್ರೆಸ್ ಮತ್ತು ಗೋಮತಿ ಎಕ್ಸ್ಪ್ರೆಸ್ನಂತಹ ಕೆಲವು ಹಗಲಿನ ಎಕ್ಸ್ಪ್ರೆಸ್ ರೈಲುಗಳಿಗೆ ಅನ್ವಯಿಸುವುದಿಲ್ಲ.
ವಿದೇಶಿ ಪ್ರವಾಸಿಗರಿಗೆ ಇರುವ 365 ದಿನಗಳ ಮುಂಗಡ ಬುಕ್ಕಿಂಗ್ ಆಯ್ಕೆ ಹಾಗೆಯೇ ಮುಂದುವರಿಯಲಿದೆ. ರೈಲ್ವೇ ಯಾವ ಕಾರಣಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್ ಅವಧಿಯನ್ನು ಕಡಿತ ಮಾಡಿದೆ ಎನ್ನುವನ್ನು ತಿಳಿಸಿಲ್ಲ.
ಅಧಿಕೃತ ಟಿಕೆಟ್ ಬುಕಿಂಗ್ ಪಾಲುದಾರ IRCTC ಜೊತೆಗೆ, ಮೇಕ್ಮೈಟ್ರಿಪ್, ಪೇಟಿಎಂ ಮತ್ತು ರೈಲ್ ಯಾತ್ರಿ ಮುಂತಾದ ಥರ್ಡ್-ಪಾರ್ಟಿ ಪ್ಲಾಟ್ಫಾರ್ಮ್ಗಳಲ್ಲಿ ರೈಲು ಟಿಕೆಟ್ಗಳನ್ನು ಬುಕ್ ಮಾಡಬಹುದು.
ರೈಲ್ವೇ ಟಿಕೆಟ್ ಕಡಿತ ಮಾಡಿದ ನಿರ್ಧಾರ ಪ್ರಕಟಗೊಂಡ ಬೆನ್ನಲ್ಲೇ IRCTC ಷೇರು ಮೌಲ್ಯ ಇಂದು 21.70 ರೂ.(2.4%) ಇಳಿಕೆಯಾಗಿ 870.90 ರೂ. ವ್ಯವಹಾರ ಮುಗಿಸಿತು.