ಸೌತ್ ಬ್ಯೂಟಿ ನಟಿ ತಮನ್ನಾ ಭಾಟಿಯಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಹೆಚ್ಪಿಝಡ್ ಆ್ಯಪ್ ಹಗರಣದಲ್ಲಿ ತಮನ್ನಾ ಭಾಟಿಯಾ ಅವರ ಹೆಸರು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ನಟಿಯನ್ನು ವಿಚಾರಣೆ ನಡೆಸಿದ್ದಾರೆ.
ಹೆಚ್ಪಿಝಡ್ ಆ್ಯಪ್ ಹಗರಣದಲ್ಲಿ ತಮನ್ನಾರನ್ನು ಆರೋಪಿಯಾಗಿ ವಿಚಾರಣೆ ನಡೆಸಿಲ್ಲ. ಬದಲಿಗೆ ಆ್ಯಪ್ ಪ್ರಚಾರ ಮಾಡಿದ್ದಕ್ಕಾಗಿ ತನಿಖೆ ಎದುರಿಸುವಂತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಜಾರಿಯಲ್ಲಿದ್ದು, ತನಿಖಾಧಿಕಾರಿಗಳ ಮುಂದೆ ಹಾಜರಾಗಲು ತಮನ್ನಾ ಭಾಟಿಯಾ ಅವರು ತಾಯಿಯ ಜೊತೆ ಗುಹವಾಟಿಗೆ ಆಗಮಿಸಿದ್ದಾರೆ.
ಈ ಹಿಂದೆಯೂ ಮಹದೇವ್ ಬೆಟ್ಟಿಂಗ್ ಆ್ಯಪ್ಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಏಪ್ರಿಲ್ ತಿಂಗಳಲ್ಲಿ ನಟಿ ವಿಚಾರಣೆ ಎದುರಿಸಿದ್ದರು. ಇದೀಗ ಹೆಚ್ಪಿಝಡ್ ಆ್ಯಪ್ ಹಗರಣದಲ್ಲಿ ಕಾನೂನಿನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೆಚ್ಪಿಝಡ್ ಆ್ಯಪ್ ಮೂಲಕ ದೊಡ್ಡ ಹಗರಣ ನಡೆದಿದೆ. ಪ್ರತಿ ದಿನ 4 ಸಾವಿರ ರೂಪಾಯಿ ಲಾಭ ನೀಡುವುದಾಗಿ ನಂಬಿಸಿ ಪ್ರತಿಯೊಬ್ಬರಿಂದ 57 ಸಾವಿರ ರೂಪಾಯಿ ಪಡೆದುಕೊಂಡು ವಂಚಿಸಲಾಗಿದೆ. ನಕಲಿ ಬ್ಯಾಂಕ್ ಖಾತೆಗಳನ್ನು ಬಳಸಿ ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಂದಾಜು 497.20 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶಕ್ಕೆ ಪಡೆದುಕೊಂಡಿದ್ದಾರೆ.
ಕೋಟ್ಯಂತರ ರೂಪಾಯಿ ಹಗರಣಕ್ಕೆ ಕಾರಣ ಆಗಿರುವ ಹೆಚ್ಪಿಝಡ್ ಆ್ಯಪ್ಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ತಮನ್ನಾ ಭಾಟಿಯಾ ಅವರು ಭಾಗಿ ಆಗಿದ್ದರು. ಅದಕ್ಕಾಗಿ ಸಂಭಾವನೆ ರೂಪದಲ್ಲಿ ತಮನ್ನಾ ಅವರಿಗೆ ಹಣ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಇಡಿ ವಿಚಾರಣೆ ಎದುರಿಸುತ್ತಿದ್ದಾರೆ.