ಬೆಂಗಳೂರು: ರಾಯಚೂರು ವಿಶ್ವವಿದ್ಯಾಲಯಕ್ಕೆ (Raichur VV) ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ (Maharshi Valmiki University) ಎಂದು ಹೆಸರು ಇಡುವುದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಉಗ್ರಪ್ಪ ಸಿಎಂ ಸಿದ್ದರಾಮಯ್ಯಗೆ ಹಲವು ಬೇಡಿಕೆಗಳನ್ನು ಇಟ್ಟರು. ಉಗ್ರಪ್ಪ ಮನವಿಗೆ ಸ್ಪಂದಿಸಿದ ಸಿಎಂ ರಾಯಚೂರು ವಿವಿಗೆ ವಾಲ್ಮೀಕಿ ಹೆಸರು ಇಡುವುದಾಗಿ ಘೋಷಿಸಿದರು
ಕಾರ್ಯಕ್ರಮದಲ್ಲಿ ಮಾತನಾಡಿದ ಉಗ್ರಪ್ಪ, ರಾಜನಹಳ್ಳಿ ವಾಲ್ಮೀಕಿ ಗುರುಪೀಠಕ್ಕೆ ಪ್ರತಿ ವರ್ಷ 2-3 ಕೋಟಿ ಕೊಡುತ್ತಿರುವ ಹಣ ನಿಲ್ಲಿಸಿ. ಅದರಿಂದ ಏನು ಪ್ರಯೋಜನ ಆಗುತ್ತಿಲ್ಲ. ಹೀಗಾಗಿ ಮಠಕ್ಕೆ ಹಣ ಕೊಡುವ ಬದಲು ಸರ್ಕಾರ ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ಮೆಡಿಕಲ್ ಕಾಲೇಜು ಅಥವಾ ಎಂಜಿನಿಯರಿಂಗ್ ಕಾಲೇಜು ಪ್ರಾರಂಭ ಮಾಡಬೇಕು. ರಾಜ್ಯದಲ್ಲಿ ಈಗ ಇರುವ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಇಡಬೇಕು. ಬೀದರ್-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಮಹರ್ಷಿ ವಾಲ್ಮೀಕಿ ರಾಷ್ಟ್ರೀಯ ಹೆದ್ದಾರಿ ಎಂದು ನಾಮಕರಣ ಮಾಡಬೇಕು. ರಾಮಾಯಣದ ಪುಸ್ತಕಗಳನ್ನು ಎಲ್ಲಾ ಶಾಲೆಗಳಲ್ಲಿ ಇಡುವ ಕೆಲಸ ಸರ್ಕಾರ ಮಾಡಬೇಕು. ನಮ್ಮ ಸಮುದಾಯದ ಅನುದಾನ ಪ್ರತಿ ವರ್ಷ ಖರ್ಚಾಗಬೇಕು. ಇಲ್ಲದೆ ಹೋದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂಗೆ ಮನವಿ ಮಾಡಿದರು.