ಎಲ್ ಜಿ ಕಂಪೆನಿ ಬಗ್ಗೆ ಸಾಕಷ್ಟು ಜನರಿಗೆ ಗೊತ್ತೆ ಇದೆ. ದಕ್ಷಿಣ ಕೊರಿಯಾ ಮೂಲದ ಎಲ್ ಜಿ ಕಂಪೆನಿ ಕೊಂಚ ವಿರಾಮದ ಬಳಿಕ ಮತ್ತೆ ಸ್ಮಾರ್ಟ್ಫೋನ್ ಉತ್ಪಾದಿಸಲು ಮುಂದಾಗಿದ್ದು, ಆ ಮೂಲಕ ಗ್ರಾಹಕರಿಗೆ ಶುಭ ಸುದ್ದಿ.
ಎಲ್ಜಿ ಕಂಪನಿ ಸ್ಮಾರ್ಟ್ಫೋನ್ ರಿಲೀಸ್ ಮಾಡಲು ಮುಂದಾಗಿದ್ದು, ಅದಕ್ಕಾಗಿ ಪೇಟೆಂಟ್ಗೆ ಅರ್ಜಿ ಸಲ್ಲಿಸಿದೆ. ಆ ಮೂಲಕ 2021ರ ಎಪ್ರಿಲ್ನಲ್ಲಿ ನಿರ್ಗಮಿಸಿದ ಕ್ಷೇತ್ರವನ್ನು ಮರು ಪ್ರವೇಶಿಸುವ ಉದ್ದೇಶವನ್ನು ಹೊಂದಿದೆ.
ಈ ಹಿಂದೆ ಎಲ್ಜಿ ಜಾಗತಿಕವಾಗಿ ಪ್ರಮುಖ ಮೊಬೈಲ್ ತಯಾರಕರಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. ನವೀನ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪರಿಚಯಿಸಿತ್ತು. ಆದರೆ ಬದಲಾಗುತ್ತಿರುವ ಮಾರುಕಟ್ಟೆಯಲ್ಲಿ ಉಳಿದ ಸ್ಮಾರ್ಟ್ಫೋನ್ ಕಂಪನಿಗಳ ವಿರುದ್ಧ ಸ್ಪರ್ಧಿಸಲಾಗದೆ ಮೊಬೈಲ್ ವಿಭಾಗವನ್ನು ಮುಚ್ಚಿತ್ತು.
ಎಲ್ಜಿ ಕಂಪನಿ ಗೃಹಉಪಯೋಗಿ ಎಲೆಕ್ಟ್ರಿಕ್ ಸಾಧನಗಳನ್ನು ಉತ್ಪಾದಿಸುತ್ತಾ ಬಂದಿದೆ. ಅದರ ಜೊತೆಗೆ ಸ್ಮಾರ್ಟ್ಫೋನ್ ಡಿಸ್ಪ್ಲೇ ಮತ್ತು ಕ್ಯಾಮೆರಾ ಸಂವೇದಕವನ್ನು ಹಿಡಿದು ಸ್ಮಾರ್ಟ್ಟಿವಿಗಳವರೆಗೆ ಎಲ್ಲವನ್ನೂ ಉತ್ಪಾದಿಸುತ್ತದೆ. ಇದೀಗ ರೋಲ್ ಮಾಡಬಹುದಾದ ಸ್ಮಾರ್ಟ್ಫೋನ್ ತಯಾರಿಸಲು ಪೇಟೆಂಟ್ಗೆ ಅರ್ಜಿ ಸಲ್ಲಿಸಿದೆ.
ಈಗಾಗಲೇ ಸ್ಯಾಮ್ಸಂಗ್ ಮಡಚಬಹುದಾದ ಸ್ಮಾರ್ಟ್ಫೋನನ್ನು ಪರಿಚಯಿಸಿದೆ. ಒಂದು ವೇಳೆ ಎಲ್ಜಿ ಇಂತಹದ್ದೇ ಸ್ಮಾರ್ಟ್ಫೋನ್ ಪರಿಚಯಿಸಿದರೆ ಸ್ಯಾಮ್ಸಂಗ್ಗೆ ಪ್ರತಿಸ್ಪರ್ಧಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.