ಬೆಂಗಳೂರು: ರಾಜ್ಯದೆಲ್ಲೆಡೆ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತಿದೆ. ಗುರುವಾರ ನಗರದ ಶಾಸಕರ ಭವನದಲ್ಲಿ ವಾಲ್ಮೀಕಿ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ನಮಿಸಿದರು
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಶ್ರೀ ವಾಲ್ಮೀಕಿ ಜಯಂತಿ ಪ್ರಯುಕ್ತ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ, ಐದು ಮಹನೀಯರಿಗೆ ವಾಲ್ಮೀಕಿ ಪ್ರಶಸ್ತಿ ವಿತರಿಸಿ ಮಾತನಾಡಿದರು.
ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ ಸಮುದಾಯದವರು. ದರೋಡೆ ಮಾಡ್ಕೊಂಡು ಓಡಾಡುತ್ತಿದ್ದ ವಾಲ್ಮೀಕಿ ರಾಮಾಯಣ ಬರೆಯಲು ಸಾಧ್ಯವಾ ಎಂದು ಕತೆ ಕಟ್ಟಿಬಿಟ್ಟರು. ತಳ ಸಮುದಾಯಗಳು, ಶೂದ್ರರು ಶಿಕ್ಷಣ, ಸಂಸ್ಕೃತ ಕಲಿಯುವುದು ನಿಷಿದ್ಧವಾಗಿತ್ತು. ಇಂಥಾ ಹೊತ್ತಲ್ಲೇ ಸಂಸ್ಕೃತ ಕಲಿತು ಶ್ಲೋಕಗಳ ಮೂಲಕ ಜಗತ್ಪ್ರಸಿದ್ದ ರಾಮಾಯಣ ಮಹಾಕಾವ್ಯ ಬರೆದರಲ್ಲಾ ಇದು ಹೆಮ್ಮೆಯ ಮತ್ತು ಮಾದರಿ ಸಂಗತಿ ಎಂದರು.
ಶಿಕ್ಷಣ ಕಲಿಯುವ ಅವಕಾಶ ಸಿಕ್ಕಾಗ ಇವರೆಲ್ಲಾ ಕಲಿತರು. ಬರೆದರು. ಜಗತ್ತಿಗೇ ಪ್ರೇರಣೆ ಆದರು. ವಾಲ್ಮೀಕಿ ಅವರು ಸಮಪಾಲು, ಸಮಬಾಳು, ಸಮಾನ ಅವಕಾಶಗಳ ಬಗ್ಗೆ ಹೇಳಿದ್ದರು. ರಾಮಾಯಣದ ರಾಮರಾಜ್ಯ ಅಂದರೆ ಸಮಪಾಲಿನ ಸಮಾನ ಅವಕಾಶಗಳ ರಾಜ್ಯ ಎಂದರ್ಥ ಎಂದರು.
ರಾಮನ ಮಕ್ಕಳಾದ ಲವ ಕುಶರಿಗೆ ಆಶ್ರಯ ನೀಡಿ ಶಿಕ್ಷಣ ಕೊಟ್ಟಿದ್ದು ವಾಲ್ಮೀಕಿ ಮಹರ್ಷಿಗಳು. ವಾಲ್ಮೀಕಿ ವಿಶ್ವಮಾನವರಾಗಿದ್ದರು ಎನ್ನುವುದಕ್ಕೆ ಇದು ಸಣ್ಣ ಉದಾಹರಣೆ ಎಂದರು
ನಮ್ಮ ಸರ್ಕಾರ ಎಲ್ಲಾ ಧರ್ಮ, ಎಲ್ಲಾ ಜಾತಿಯ ಬಡವರಿಗೆ ಆರ್ಥಿಕ ಶಕ್ತಿ ಕೊಡಲು ಗ್ಯಾರಂಟಿಗಳನ್ನು ಜಾರಿಗೆ ತಂದರೆ ಇದನ್ನು ವಿರೋಧಿಸಿದವರು ಬಿಜೆಪಿಯವರು. ಆದ್ದರಿಂದ ಗ್ಯಾರಂಟಿಗಳ ಫಲಾನುಭವಿಗಳು ಬಿಜೆಪಿಯವರಿಗೆ ಸರಿಯಾಗಿ ಪಾಠ ಹೇಳಿ. ಬಿಜೆಪಿಯವರ ಸುಳ್ಳುಗಳಿಗೆ ತಲೆ ಕೊಟ್ಟು ಮೋಸ ಹೋಗದೆ ಬಿಜೆಪಿ ಸುಳ್ಳುಗಳಿಗೆ ಸರಿಯಾದ ಉತ್ತರ ಕೊಡಿ. ಬಡ್ತಿಯಲ್ಲಿ ಮೀಸಲಾತಿಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಅದನ್ನು ಮೊದಲಿಗೆ ಜಾರಿಗೆ ತಂದಿದ್ದು ನಮ್ಮ ಸರ್ಕಾರ. ಗುತ್ತಿಗೆಯಲ್ಲಿ ಮೀಸಲಾತಿ ಮೊದಲಿಗೆ ತಂದಿದ್ದು ನಮ್ಮ ಸರ್ಕಾರ. ಇದನ್ನು ನಾಡಿನ ಜನತೆ ಅರ್ಥಮಾಡಿಕೊಳ್ಳಬೇಕು ಎಂದರು.
ಚಿತ್ರದುರ್ಗದ ಕಿಲಾರೆ ಜೋಗಯ್ಯ, ಚಾಮರಾಜನಗರದ ಡಾ.ರತ್ನಮ್ಮ, ಬೆಳಗಾವಿಯ ರಾಜಶೇಖರ ತಳವಾರ, ಬೆಂಗಳೂರು ಕೇಂದ್ರದ ಕೆ.ಎಸ್.ಮೃತ್ಯುಂಜಯ, ಕಲಬುರಗಿಯ ರತ್ನಮ್ಮ ಬಿ ಸೋಗಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜನಹಳ್ಳಿ ವಾಲ್ಮೀಕಿ ಸಮುದಾಯದ ಮಠದ ಜಗದ್ಗುರು ಪ್ರಸನ್ನಾ ನಂದಪುರಿ ಶ್ರೀಗಳ ದಿವ್ಯ ಸಾನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಹೆಚ್.ಕೆ.ಪಾಟೀಲ್, ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಸವನಗೌಡ ದದ್ದಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, KKRDB ಅಧ್ಯಕ್ಷರಾದ ಅಜಯ್ ಸಿಂಗ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರುಗಳು ಸೇರಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.