ವಿಶ್ವ ಆಹಾರ ದಿನ (World Food Day)ವನ್ನು ಆಹಾರ ಭದ್ರತೆಯ ಮಹತ್ವವನ್ನು ಒತ್ತು ನೀಡುವ ವಿವಿಧ ವಿಷಯಗಳೊಂದಿಗೆ ಆಚರಿಸಲಾಗುತ್ತದೆ. ಇಂದು (ಅಕ್ಟೋಬರ್ 16) ಜಗತ್ತಿನಾದ್ಯಂತ ‘ವಿಶ್ವ ಆಹಾರ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಮಂಡಳಿಯು ಇದನ್ನು ಪ್ರಾರಂಭಿಸಿದ್ದು, ಹಸಿವಿನ ಸಮಸ್ಯೆ ಹಾಗೂ ಆರೋಗ್ಯಕರ ಆಹಾರದ ಸೇವನೆಯ ಕುರಿತು ಜಾಗೃತಿ ಮೂಡಿಸಲಿದೆ. ಈ ವರ್ಷ ಆಹಾರ ಮತ್ತು ಕೃಷಿ ಮಂಡಳಿ ಎಫ್ಎಒನೊಂದಿಗೆ, UNHCR, ವಿಶ್ವಸಂಸ್ಥೆ ರೆಫ್ಯೂಜಿ ಏಜೆನ್ಸಿ, ವಿಶ್ವ ಆಹಾರ ಯೋಜನೆ ಕೈಜೋಡಿಸಿವೆ.
ವಿಶ್ವದಾದ್ಯಂತ 150 ದೇಶಗಳಲ್ಲಿ ಸರ್ಕಾರ ಹಾಗೂ ಇತರ ಸಂಸ್ಥೆಗಳ ಸಹಯೋಗದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಕೊಳ್ಳಲಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಈ ವರ್ಷದ ವಿಶ್ವ ಆಹಾರ ದಿನವನ್ನು ‘ಉತ್ತಮ ಆಹಾರವು ಆರೋಗ್ಯಕರ ನಾಳೆಗಳಿಗೆ ಬುನಾದಿ’ ಎಂಬ ಪರಿಕಲ್ಪನೆಯಲ್ಲಿ ನಡೆಸಲಾಗುತ್ತಿದೆ.
ವಿಶ್ವ ಆಹಾರ ದಿನದ ಹಿನ್ನೆಲೆ: 1979ರ ನವೆಂಬರ್ನಲ್ಲಿ ಹಂಗೇರಿಯಾದ ಆಹಾರ ಮತ್ತು ಕೃಷಿಯ ಮಾಜಿ ಮಂತ್ರಿ ಡಾ.ಪಾಲ್ ರೋಮನಿ ಅವರು ವಿಶ್ವ ಆಹಾರ ದಿನವನ್ನು ಆರಂಭಿಸಿದರು. ನಂತರದಲ್ಲಿ ವಿಶ್ವದಾದ್ಯಂತ ಇದು ಪಸರಿಸಿ, ಹಸಿವು, ಪೌಷ್ಠಿಕಾಂಶದ ಕೊರತೆ, ಆಹಾರ ಉತ್ಪಾದನೆ ಮೊದಲಾದ ವಿಷಯಗಳ ಕುರಿತು ಜಾಗೃತಿ ಮೂಡಿಸುವ ದಿನವಾಗಿ ಇದು ಬದಲಾಯಿತು.
ವಿಶ್ವ ಆಹಾರ ದಿನದ ಮಹತ್ವ: ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಮಂಡಳಿಯ ಸಂಸ್ಥಾಪನೆಯ ನೆನಪಿಗೆ ಆಹಾರ ದಿನವನ್ನು ಜಗತ್ತಿನಾದ್ಯಂತ ಆಚರಿಸುವ ಪದ್ಧತಿ ಆರಂಭವಾಯಿತು. ಮುಖ್ಯವಾಗಿ ಜಗತ್ತಿನಲ್ಲಿ ಹಸಿವನ್ನು ನಿರ್ಮೂಲನೆ ಮಾಡುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. ಈ ವರ್ಷ ಇಂದು ವಿಶ್ವದಲ್ಲಿ ಹಸಿವಿನ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಪಣತೊಟ್ಟು, ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗಳಿಗೆ ಗೌರವ ಸಲ್ಲಿಸಲಾಗುತ್ತದೆ.
ಒಂದೆಡೆ ಆಹಾರೋದ್ಯಮ ಬೆಳೆಯುತ್ತಿದ್ದರೆ ಇನ್ನೊಂದೆಡೆ ಜನರು ಹಸಿವಿನಿಂದ ಸಾಯುತ್ತಿರುವ ಘಟನೆಗಳೂ ಹೆಚ್ಚುತ್ತಿದೆ. ಇದರ ಜೊತೆಗೆ ಆಹಾರವನ್ನು ರಕ್ಷಣೆ ಮಾಡುವ ಒಂದು ವ್ಯವಸ್ಥೆ ನಮ್ಮಲ್ಲಿ ಸಾಕಷ್ಟಿಲ್ಲ. ಹಸಿವು ಮತ್ತು ಬಡತನದಿಂದ ನರಳುತ್ತಿರುವ ಜನರಿಗೆ ಸೂಕ್ತ ಆಹಾರ ನೀಡಬೇಕು. ನಮ್ಮಲ್ಲಿ ಯಾರೂ ಹಸಿವಿನಿಂದ ಸಾಯಬಾರದು ಎಂಬ ಉದ್ದೇಶದಿಂದ ಕೂಡ ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ.