ಬೆಂಗಳೂರು:- ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಬೆಂಗಳೂರಿಗೆ ದೊಡ್ಡ ಮಳೆಯನ್ನೇ ಹೊತ್ತುತಂದಿದೆ. ಭಾನುವಾರ ಸಂಜೆಯಿಂದಲೂ ಶುರುವಾಗಿದ್ದ ಮಳೆ ಸೋಮವಾರ ಸಂಜೆವರೆಗೂ ಒಂದೇ ಸಮನೇ ಧಾರಾಕಾರವಾಗಿ ಸುರಿದಿದೆ.
ಆಗೋಮ್ಮೆ ಈಗೊಮ್ಮೆ ಬಿಡುವು ಕೊಟ್ಟರೂ ಬರೋಬ್ಬರಿ 59.8 ಮಿ.ಮೀ ಮಳೆಯಾಗಿದೆ. ಅದರಲ್ಲೂ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 80.01 ಮಿ.ಮೀ ಮಳೆ ದಾಖಲಾಗಿದೆ. ಈ ವರುಣಾರ್ಭಟ ಬೆಂಗಳೂರಿನಲ್ಲಿ ಸೃಷ್ಟಿಸಿರೋ ಅವಾಂತರಗಳು ಒಂದೆರಡಲ್ಲ.
ಗೊರಗುಂಟೆಪಾಳ್ಯ ಬಳಿಯ ರಾಜಕುಮಾರ್ ರಸ್ತೆಯಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದಿದ್ದು, ಟೆಂಪೊ, ಕಾರು ಜಖಂ ಆಗಿದ್ದವು. ಮರ ಬಿದ್ದಿದ್ದರಿಂದ ಟ್ರಾಫಿಕ್ಜಾಮ್ ಉಂಟಾಗಿ ಸವಾರರು ಪರದಾಡಿದರು.
ಬೆಂಗಳೂರು ನಗರದ ಹೆಚ್ಎಂಟಿ ಲೇಔಟ್, ವಿದ್ಯಾರಣ್ಯಪುರದಲ್ಲಿ ಮರಗಳು ನೆಲಕ್ಕುರುಳಿದವು. ಇದರಿಂದ ಕೆಲಕಾಲ ಸವಾರರು ಪರದಾಡುವಂತಾಯಿತು. ಬಳಿಕ ಬಿಬಿಎಂಪಿ ಸಿಬ್ಬಂದಿ ನೆಲಕ್ಕುರುಳಿದ್ದ ಮರ ತೆರವು ಮಾಡಿದರು.
ಮಾನ್ಯತಾ ಟೆಕ್ಪಾರ್ಕ್ ಬಳಿ ರಸ್ತೆ ಬದಿಯೇ ಬೃಹತ್ ಕಟ್ಟಡ ಕಾಮಗಾರಿ ನಡೆಯುತ್ತಿದೆ. 30 ಅಡಿಯಷ್ಟು ನೆಲ ಅಗೆಯಲಾಗಿದ್ದು, ರಸ್ತೆ ಪಕ್ಕದಲ್ಲೇ ಕ್ಷಣಕ್ಷಣ ಭೂಮಿ ಕುಸಿಯುತ್ತಿದೆ. ನೋಡ ನೋಡುತ್ತಿದ್ದಂತೆಯೇ ಕಾಂಪೌಂಡ್ ಕೂಡಾ ಕುಸಿದು ಬಿದ್ದಿದ್ದು, ಸವಾರರು ಜೀವಭಯದಲ್ಲೇ ಸಂಚರಿಸುತ್ತಿದ್ದರು.
ಬೆಳ್ಳಂದೂರು ಕೆರೆ ರಸ್ತೆ ಕೂಡಾ ಈಗ ಕೆರೆಯಂತೆಯೇ ಆಗಿದೆ. ರಸ್ತೆ ಮೇಲೆ 2 ಅಡಿಯಷ್ಟು ನೀರು ನಿಂತಿದ್ದು ಸವಾರರು ಅದರಲ್ಲೇ ಸರ್ಕಸ್ ಮಾಡುತ್ತಾ ಸಾಗಿದರು.
ವಿಶ್ವದ ದೈತ್ಯ ಐಟಿ ಕಂಪನಿಗಳು ವಾಸ್ತವ್ಯ ಹೂಡಿರುವ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ರಸ್ತೆಯೇ ಕಾಣದಾಯಿತು. ಮಂಡಿ ಮಟ್ಟಕ್ಕೆ ತುಂಬಿದ್ದ ನೀರಿನಲ್ಲೇ ಬೈಕ್ ಸವಾರರು ಸಂಚಾರ ಮಾಡಿದರು.