ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರುಣ ಅಬ್ಬರಿಸುತ್ತಿದ್ದು ಬೆಳಗ್ಗೆಯಿಂದ ಸುರಿದ ಮಳೆಗೆ ಹಲವೆಡೆ ಮರಗಳು ಧರೆಗುಳಿದಿದ್ದು, ಮತ್ತೆ ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿವೆ. ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನಗರದ ಓಕಳೀಪುರ ಅಂಡರ್ ಪಾಸ್ನಲ್ಲಿ ನೀರು ತುಂಬಿದ್ದು, ಕೆರೆಯಂತಾಗಿದೆ. ಅಂಡರ್ ಪಾಸ್ ಪೂರ್ತಿ ಮಳೆ ನೀರು ತುಂಬಿದ್ದು, ವಾಹನ ಸವಾರರು ಚಾಲನೆಗೆ ಹರಸಾಹಸಪಡುವಂತಾಗಿದೆ.
ಅಂಡರ್ ಪಾಸ್ನಲ್ಲಿ ನೀರು ನಿಂತಿರುವ ಕಾರಣ ವಾಹನಗಳು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಪರದಾಟಪಡುವಂತಾಯಿತು. ಕಿಲೋಮೀಟರ್ಗಟ್ಟಲೇ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.
ಅರ್ಧಗಂಟೆಯಿಂದಳು ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಬರೋಬ್ಬರಿ 2 ಕಿಲೋಮೀಟರ್ ವರೆಗೂ ಟ್ರಾಫಿಕ್ ಜಾಮ್ ಆಗಿದೆ. ಮಳೆಯ ಅಬ್ಬರದಿಂದ ಸಿಟಿ ಮಂದಿ ತತ್ತರಿಸಿ ಹೋಗಿದ್ದಾರೆ. ಆಫೀಸ್ ಹೋಗುವವರು, ಶಾಲೆಗೆ ಹೋಗುವವರು ಪರದಾಡಿದ್ದಾರೆ.
ಮಳೆಯಿಂದಾಗಿ HMT ಲೇಔಟ್ನಲ್ಲಿ ಬೃಹದಾಕಾರದ ಮರ ಧರೆಗುರುಳಿದೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ ಮರ ನೆಲಕ್ಕುರುಳಿದ್ದು, ಮರ ಬಿದ್ದ ಪರಿಣಾಮ ಮನೆ ಮುಂದೆ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. 3 ತಿಂಗಳ ಹಿಂದೆ ಮರ ತೆರವು ಮಾಡುವಂತೆ ಬಿಬಿಎಂಪಿಗೆ ದೂರು ನೀಡಿದ್ದರು ಕ್ಯಾರೆ ಎಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.