ಕೋಲಾರ: ನವರಾತ್ರಿ ಹಬ್ಬದ ಪ್ರಯುಕ್ತ ನಗರದ ಟೇಕಲ್ ರಸ್ತೆಯಲ್ಲಿರುವ ಕೋಲಾರ ವ್ಯಾಯಾಮ ಶಾಲೆ(ಗರಡಿ ಮನೆ) ವತಿಯಿಂದ ನಡೆದ ಗಣೇಶೋತ್ಸವ ಹಾಗೂ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಗರಡಿ ಮನೆಯಲ್ಲಿಯೇ ತರಬೇತಿ ಪಡೆದ ಹೃತ್ವಿಕ್ ಆಯ್ಕೆಯಾಗಿ 10ಸಾವಿರ ರೂ. ಹಾಗೂ ಟ್ರೋಫಿ ತನ್ನದಾಗಿಸಿಕೊಂಡರು.
ನಗರದ ಟೇಕಲ್ ವೃತ್ತದಲ್ಲಿ ಪ್ರತಿವರ್ಷದಂತೆ ನವರಾತ್ರಿ ಹಬ್ಬದಂದು ಗರಡಿ ಮನೆ ಹುಡುಗರಿಂದ ಗಣೇಶೋತ್ಸವ ಆಚರಿಸಲಾಗುತ್ತದೆ. ಈ ಹಿನ್ನೆಲೆ ‘ಗರಡಿ ಮನೆ ಶ್ರೀ 2024’ ದೇಹದಾರ್ಡ್ಯ ಸ್ಪರ್ಧೆ ಏರ್ಪಡಿಸಿದ್ದು, ಸ್ಪರ್ಧೆಯಲ್ಲಿ ವ್ಯಾಯಾಮ ಶಾಲೆಯ15 ದೇಹದಾರ್ಡ್ಯ ಪಟುಗಳು ಭಾಗವಹಿಸಿ ನೋಡುಗರ ಹುಬ್ಬೇರಿಸಿದರು.
ಇವರಲ್ಲಿ ಅತ್ಯಾಕರ್ಷಕವಾಗಿ ದೇಹದಾರ್ಡ್ಯ ಪ್ರದರ್ಶನ ನೀಡಿದ ಹೃತ್ವಿಕ್ ಪ್ರಥಮ ಬಹುಮಾನ, ಗಣೇಶ್ ದ್ವಿತೀಯ ಹಾಗೂ ನಿಖಿಲ್ ತೃತೀಯ ಬಹುಮಾನ ಗೆದ್ದರು.
ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 10 ಸಾವಿರ, ದ್ವಿತೀಯ ಸ್ಥಾನ ಪಡೆದವರಿಗೆ 4 ಸಾವಿರ, ತೃತೀಯ ಸ್ಥಾನ ಪಡೆದವರಿಗೆ 3 ಸಾವಿರ, ನಾಲ್ಕನೆ ಸ್ಥಾನ ಪಡೆದವರಿಗೆ 2 ಸಾವಿರ, ಐದನೇ ಸ್ಥಾನ ಪಡೆದವರಿಗೆ 1 ಸಾವಿರ ರೂ. ಗಳ ಚೆಕ್ ಹಾಗೂ ಟ್ರೋಪಿ, ಪ್ರಶಸ್ತಿ ಪತ್ರ ಮತ್ತು ಟ್ರ್ಯಾಕ್ ಸೂಟ್ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಂಜುನಾಥ್, ಮಾಜಿ ನಗರಸಭೆ ಸದಸ್ಯ ಚಿಟ್ಟಿ, ಶ್ರೀ ಭುವನೇಶ್ವರಿ ಸಂಘದ ಅಧ್ಯಕ್ಷ ತ್ಯಾಗರಾಜ್, ಗರಡಿ ಪಟುಗಳಾದ ರಮೇಶ್, ರಾಜು, ಆನಂದ್, ಶಿವು, ಹರ್ಷ, ವೆಂಕಟೇಶ್ ಬಾಬು, ಗಣೇಶ್, ನಟರಾಜ್, ಶಶಿ, ಭಂಡಾರಿ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.