ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸಿದ್ದಾರ್ಥ ವಿಹಾರ್ ಟ್ರಸ್ಟ್ಗೆ ಕೆಐಎಡಿಬಿಗೆ ಭೂಮಿ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಆರೋಪದ ಕಾವು ಹೆಚ್ಚಾಗುವ ಮುನ್ನವೇ ಭೂಮಿ ವಾಪಸ್ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ವಿವಾದ ರಾಜ್ಯಪಾಲರ ಅಂಗಳಕ್ಕೆ ತಲುಪುತ್ತಿದ್ದಂತೆಯೇ ಖರ್ಗೆ ಕುಟುಂಬ ಭೂಮಿ ವಾಪಸ್ ನೀಡಲು ನಿರ್ಧರಿಸಿದೆ. ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ.
ಸಿದ್ಧಾರ್ಥ ವಿಹಾರ ಟ್ರಸ್ಟ್ನಿಂದ 5 ಎಕರೆ ಸಿಎ ನಿವೇಶನ ವಾಪಸ್ ಮಾಡಿದ ವಿಚಾರವಾಗಿ ಮಾತನಾಡಿ, ಇಲ್ಲಿ ತಪ್ಪಾಗಿದೆ ಎಂದು ಅವರು ಭೂಮಿ ವಾಪಸ್ ಮಾಡಿಲ್ಲ. ಕಾನೂನು ಉಲ್ಲಂಘನೆ ಆಗಿರಲಿಲ್ಲ. ಆದರೂ ವಿವಾದ ಸೃಷ್ಟಿಸಲಾಗಿದೆ. ಆಪಾದನೆ ಮಾಡಿದ್ದಕ್ಕೆ ಅವರು ಭೂಮಿ ಬೇಡ ಅಂತ ವಾಪಸ್ ಮಾಡಿದ್ದಾರೆ. ಬಿಜೆಪಿಯವರಿಗೆ ಕಾಮಾಲೆ ಕಣ್ಣು, ಎಲ್ಲವನ್ನೂ ಹಳದಿಯಾಗೇ ಕಾಣ್ಸತ್ತೆ. ಅವರಿಗೆ ಬೇರೆ ಬಣ್ಣ ಕಾಣಲ್ಲ ಎಂದು ಹರಿಹಾಯ್ದರು.
ಅ.15 ರಂದು ಕೆ ಸಿ ವೇಣುಗೋಪಾಲ ರಾಜ್ಯಕ್ಕೆ ಆಗಮನ ವಿಚಾರವಾಗಿ ಮಾತನಾಡಿ, ನಾಳೆ ಕೇಂದ್ರದ ಪಿಎಸಿ ಕಮಿಟಿ ರಾಜ್ಯಕ್ಕೆ ಬರುತ್ತಿದೆ. ರಾಜ್ಯಕ್ಕೆ ಬಂದಾಗ ಸರ್ಕಾರ, ಪಕ್ಷದ ಕೆಲಸಗಳನ್ನು ಗಮನಿಸುತ್ತಾರೆ. ಇಲ್ಲಿ ಏನಾಗುತ್ತಿದೆ ಎಂದು ಸಹಜವಾಗಿ ಗಮನಿಸುತ್ತಾರೆ. ನಾನು ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಅಜೆಂಡಾ ಇಲ್ಲ ಎಂದರು.