ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈಗಾಗಲೇ ಹಲವು ದಾಖಲೆ ನಿರ್ಮಿಸಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಅಕ್ಟೋಬರ್ 16 ರಿಂದ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ನಾಲ್ಕು ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ.
ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರದಿದ್ದರೂ, ಹಲವು ದಾಖಲೆಗಳನ್ನು ಮುರಿದು ಗಮನ ಸೆಳೆದಿದ್ದರು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹಿಟ್ ಮ್ಯಾನ್ ಮುರಿಯಬಲ್ಲ ಪ್ರಮುಖ 4 ದಾಖಲೆಗಳ ವಿವರ ಇಲ್ಲಿದೆ.
ಭಾರತ ತಂಡದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ತಮ್ಮ ಟೆಸ್ಟ್ ಕೆರಿಯರ್ ನಲ್ಲಿ ಹಲವು ದಾಖಲೆ ನಿರ್ಮಿಸಿದ್ದು, 91 ಸಿಕ್ಸರ್ ಸಿಡಿಸುವ ಮೂಲಕ ಭಾರತ ತಂಡದ ಪರ ಅತಿ ಹೆಚ್ಚು ಸಿಕ್ಸ್ ಬಾರಿಸಿದ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ. ನ್ಯೂಜಿಲೆಂಡ್ ಸರಣಿಯಲ್ಲಿ ಹಿಟ್ ಮ್ಯಾನ್ 5 ಸಿಕ್ಸ್ ಬಾರಿಸಿದರೆ ಸೆಹ್ವಾಗ್ ದಾಖಲೆಯನ್ನು ರೋಹಿತ್ ಶರ್ಮಾ ಮುರಿಯಲಿದ್ದಾರೆ. ಮುಂಬೈ ಆಟಗಾರ ಟೆಸ್ಟ್ ನಲ್ಲಿ ಒಟ್ಟಾರೆ 87 ಸಿಕ್ಸ್ ಬಾರಿಸಿದ್ದಾರೆ.
ಐಸಿಸಿ ಆಯೋಜನೆಯ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ 11 ಪಂದ್ಯಗಳಿಂದ 742 ರನ್ ಗಳಿಸಿದ್ದು, ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ 258 ರನ್ ಬಾರಿಸಿದರೆ, ಡಬ್ಲ್ಯುಟಿಸಿ ಪಯಣದಲ್ಲಿ ಎರಡು ಬಾರಿ 1000 ರನ್ ಗಳಿಸಿದ ಭಾರತದ ಮೊದಲ ಆಟಗಾರ ಎಂಬ ಕೀರ್ತಿಗೆ ರೋಹಿತ್ ಶರ್ಮಾ ಪಾತ್ರರಾಗಲಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಯಶಸ್ವಿ ನಾಯಕರಾಗಿರುವ ರೋಹಿತ್ ಶರ್ಮಾ, ಟಿ20-ಐ ವಿಶ್ವಕಪ್ ಟ್ರೋಫಿ ಗೆದ್ದು ಸಂಭ್ರಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲೂ ನಾಯಕನಾಗಿ ಉತ್ತಮ ದಾಖಲೆ ಹೊಂದಿದ್ದು, 18 ಪಂದ್ಯಗಳಲ್ಲಿ 12ರಲ್ಲಿ ಗೆಲುವು ಸಾಧಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ 3-0 ಯಿಂದ ಸರಣಿ ಕ್ಲೀನ್ ಸ್ವೀಪ್ ಸಾಧಿಸಿದರೆ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ದಾಖಲೆ ಹಿಂದಿಕ್ಕಲಿದ್ದಾರೆ.