ಚಿಕ್ಕಬಳ್ಳಾಪುರ:- ದಸರಾ ಹಿನ್ನೆಲೆ ಸಾಲು ಸಾಲು ರಜೆ ಇರುವುದರಿಂದ ನಂದಿಬೆಟ್ಟಕ್ಕೆ ಜನರ ದಂಡು ಜೋರಾಗಿದೆ.
ಬೆಳಗಿನಿಂದಲೂ ಸರಿಸುಮಾರು 30 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ನಂದಿಬೆಟ್ಟಕ್ಕೆ ಆಗಮಿಸಿದ್ದು. ಇನ್ನೂ ಸರದಿ ಸಾಲಿನಲ್ಲೇ ಐದಾರು ಕಿ.ಮೀ ದೂರ ವಾಹನಗಳು ನಿಂತಿವೆ.
ನಂದಿಬೆಟ್ಟ ನೋಡಲು ಆಗಮಿಸಿರುವ ಪ್ರವಾಸಿಗರು ಗಂಟೆಗಟ್ಟಲೆ ರಸ್ತೆಯಲ್ಲೇ ಕಾಲ ಕಳೆಯುವಂತಾಗಿತು. ರಾಜಧಾನಿ ಬೆಂಗಳೂರಿನ ಜನವಂತೂ ಇಂದು ಬೆಳ್ಳಂಬೆಳಗ್ಗೆ ಕಾರು ಬೈಕ್ಗಳ ಮೂಲಕ ಗಿರಿಧಾಮಕ್ಕೆ ಲಗ್ಗೆಯಿಟ್ಟಿದ್ದರು. ಒಂದೇ ಸಮಯದಲ್ಲಿ ಸಾವಿರಾರು ಮಂದಿ ಯುವಕ, ಯುವತಿಯರು ಗಿರಿಧಾಮಕ್ಕೆ ಲಗ್ಗೆ ಹಾಕಿದ್ದರಿಂದ ಪ್ರವಾಸಿತಾಣ ಗಿರಿಧಾಮದಲ್ಲಿ ಜನ ಜಂಗುಳಿ, ಜನಜಾತ್ರೆ ಕಂಡು ಬಂದಿತು.
ನಾಮುಂದು ತಾಮುಂದು ಅಂತಾ ಜನ ಪ್ರವೇಶ ದ್ವಾರದಲ್ಲಿ ಮುಗಿಬಿದ್ದ ದೃಶ್ಯ ಕಂಡು ಬಂದಿದೆ. ಸ್ವಲ್ಪ ತಡವಾದರೂ ಗಿರಿಧಾಮದಲ್ಲಿ ಪ್ರವೇಶ ಸಿಗುತ್ತದೋ ಇಲ್ಲವೋ ಎಂದು ಬೆಳಿಗ್ಗೆ 5 ಗಂಟೆಗೆ ಆಗಮಿಸಿ ಪ್ರಕೃತಿ ಸೊಬಗನ್ನು ಸವಿದರು. ಆದರೆ ಟ್ರಾಫಿಕ್ ಕಿರಿ ಕಿರಿಯಿಂದ ಹಲವು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದರು.