ನಾಗಪುರ: ನಮ್ಮ ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆ ಭಾರತದ ಹಿಂದೂಗಳಿಗೂ (Hindu) ಒಂದು ಪಾಠ. ನಾವು ದುರ್ಬಲರಾಗಿದ್ದರೆ ನಮ್ಮ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ಅದಕ್ಕಾಗಿ ನಾವು ಎಲ್ಲಿದ್ದರೂ ಒಗ್ಗಟ್ಟಾಗಿ ಮತ್ತು ಸಬಲರಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಸರಸಂಚಾಲಕ ಮೋಹನ್ ಭಾಗವತ್ (Mohan Bhagwat) ಹೇಳಿದರು.
ವಿಜಯದಶಮಿ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಸ್ವಯಂ ಸೇವಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಎಲ್ಲಿಯವರೆಗೂ ಬಾಂಗ್ಲಾದಲ್ಲಿ ಮೂಲಭೂತವಾದಿ ಸ್ವಭಾವ ಇರುತ್ತದೆಯೋ ಅಲ್ಲಿಯವರೆಗೆ ಹಿಂದೂಗಳ ಸಹಿತ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ತಲೆಯ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಲೇ ಇರುತ್ತದೆ ಎಂದು ತಿಳಿಸಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಪದ್ಮಭೂಷಣ ಪುರಸ್ಕೃತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಇಸ್ರೋ ಮಾಜಿ ಮುಖ್ಯಸ್ಥ ಕೆ ಶಿವನ್ ಉಪಸ್ಥಿತರಿದ್ದರು.
ವಿಶ್ವದಲ್ಲಿ ಭಾರತಕ್ಕೆ ಪ್ರಾಮುಖ್ಯತೆ ಸಿಗುತ್ತಿರುವುದರಿಂದ ಯಾರ ಸ್ವಾರ್ಥ ಹೊಡೆದುರುಳುತ್ತದೆಯೋ ಅಂತಹ ಶಕ್ತಿಗಳು ಭಾರತ ಒಂದು ಚೌಕಟ್ಟಿನೊಳಗೆ ಬೆಳೆಯುವಂತೆ ಮಾಡಲು ನಿರೀಕ್ಷೆಯಂತೆಯೇ ಶ್ರಮಿಸುತ್ತಿದೆ. ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡುವುದರಲ್ಲಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಚುನಾಯಿತ ಅಲ್ಲಿನ ಸರ್ಕಾರಗಳನ್ನು ಹಿಂಸಾತ್ಮಕ ಮಾರ್ಗದ ಮೂಲಕ ಕೆಳಗಿಳಿಸುವುದಕ್ಕೂ ಆ ಶಕ್ತಿಗಳು ಹಿಂದೇಟು ಹಾಕುವುದಿಲ್ಲ.
ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾತ್ಮಕ ದಂಗೆಯ ತಾತ್ಕಾಲಿಕ ಕಾರಣಗಳು ಈ ಘಟನಾ ಕ್ರಮದ ಒಂದು ಮುಖ ಮಾತ್ರ. ಹಾಗೆಯೇ ಅಲ್ಲಿರುವ ಹಿಂದೂ ಸಮಾಜದ ಮೇಲೆ ಯಾವುದೇ ಕಾರಣವಿಲ್ಲದೇ ನಡೆಯುವ ಅಮಾನವೀಯ ಅತ್ಯಾಚಾರದ ಪರಂಪರೆ ಮತ್ತೆ ಮರುಕಳಿಸಿದೆ. ಆ ದೌರ್ಜನ್ಯದ ವಿರುದ್ಧ ಅಲ್ಲಿನ ಹಿಂದೂಗಳು ಈ ಬಾರಿ ಸಂಘಟಿತರಾಗಿ ತಮ್ಮನ್ನು ಸಂರಕ್ಷಿಸಿಕೊಳ್ಳುವುದಕ್ಕಾಗಿ ಮನೆಯಿಂದ ಹೊರಬಂದು ವಿರೋಧಿಸಿದ್ದರಿಂದ ಸ್ವಲ್ಪ ಪಾರಾಗಿದ್ದಾರೆ. ಆದರೆ ಎಲ್ಲಿಯವರೆಗೂ ಅಲ್ಲಿ ಮೂಲಭೂತವಾದಿ ಸ್ವಭಾವ ಇರುತ್ತದೆಯೋ ಅಲ್ಲಿನ ಹಿಂದೂಗಳ ಸಹಿತ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ತಲೆಯ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಲೇ ಇರುತ್ತದೆ. ಆದ್ದರಿಂದ ಆ ದೇಶದಿಂದ ಭಾರತಕ್ಕೆ ಒಳನುಸುಳುತ್ತಿರುವ ಮತ್ತು ಅದರ ಕಾರಣದಿಂದಾಗಿ ಇಲ್ಲಿ ಉದ್ಭವಿಸುತ್ತಿರುವ ಜನಸಂಖ್ಯಾ ಅಸಮತೋಲನವು ಇಲ್ಲಿನ ಸಾಮಾನ್ಯ ಜನರನ್ನು ಬಾಧಿಸುವ ಚಿಂತೆಯ ವಿಷಯವಾಗಿದೆ.