ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ (Pakistan) ವಿರುದ್ಧ ಇಂಗ್ಲೆಂಡ್ (England) ಇನ್ನಿಂಗ್ಸ್ ಮತ್ತು 47 ರನ್ಗಳಿಂದ ಜಯಗಳಿಸಿದೆ. ತವರಿನಲ್ಲಿ ಸೋಲುವ ಮೂಲಕ ಪಾಕಿಸ್ತಾನ 147 ವರ್ಷಗಳ ಟೆಸ್ಟ್ ಕ್ರಿಕೆಟ್ ( Test Cricket) ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆದಿದೆ.
ಇಲ್ಲಿಯವರೆಗೆ ಯಾವುದೇ ತಂಡ ಮೊದಲ ಇನ್ನಿಂಗ್ಸ್ನಲ್ಲಿ 500 ರನ್ ಗಳಿಸಿ ಸೋತಿರಲಿಲ್ಲ. ಆದರೆ ಪಾಕಿಸ್ತಾನ ಮೊದಲ ಬಾರಿಗೆ ಇಷ್ಟೊಂದು ಹೀನಾಯವಾಗಿ ಸೋಲುವ ಮೂಲಕ ಕೆಟ್ಟ ದಾಖಲೆ ಬರೆದಿದೆ.
267 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ 54.5 ಓವರ್ಗಳಲ್ಲಿ 220 ರನ್ಗಳಿಗೆ ಆಲೌಟ್ ಆಗಿದೆ.
ಈ ಪಂದ್ಯದ ವಿಶೇಷ ಏನೆಂದರೆ ಮೊದಲ ಎರಡು ದಿನ ಪಾಕಿಸ್ತಾನ ಬ್ಯಾಟ್ ಮಾಡಿದ್ದರೆ ನಂತರದ ಎರಡು ದಿನ ಇಂಗ್ಲೆಂಡ್ ಬ್ಯಾಟ್ ಮಾಡಿತ್ತು. ನಾಲ್ಕನೇ ದಿನ 7 ವಿಕೆಟ್ ನಷ್ಟಕ್ಕೆ 823 ರನ್ಗಳಿಸಿ ಇಂಗ್ಲೆಂಡ್ ಡಿಕ್ಲೇರ್ ಮಾಡಿಕೊಂಡ ನಂತರ ಪಂದ್ಯ ಮಹತ್ವದ ತಿರುವು ಪಡೆದುಕೊಂಡಿತ್ತು. ಎರಡು ತಂಡಗಳು 500ಕ್ಕೂ ಅಧಿಕ ರನ್ ಸಿಡಿಸಿದರೂ ನಾಲ್ಕೂವರೆ ದಿನದಲ್ಲೇ ಪಂದ್ಯ ಅಂತ್ಯ ಕಂಡಿದ್ದು ವಿಶೇಷ.
ಎರಡನೇ ಇನ್ನಿಂಗ್ಸ್ನಲ್ಲಿ ಪಾಕ್ ಪರ ಅಘಾ ಸಲ್ಮಾನ್ 63 ರನ್, ಅಮಿರ್ ಜಮಾಲ್ 55 ರನ್ ಗಳಿಸಿ ಗರಿಷ್ಠ ರನ್ ಗಳಿಸಿದ ಆಟಗಾರರು ಎನಿಸಿಕೊಂಡರು. ಅಘಾ ಸಲ್ಮಾನ್ ಮತ್ತು ಅಮಿರ್ ಜಮಾಲ್ 7ನೇ ವಿಕೆಟಿಗೆ 146 ಎಸೆತಗಳಲ್ಲಿ 109 ರನ್ ಜೊತೆಯಾಟವಾಡಿ ಸ್ವಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಯಾವುದೇ ಉತ್ತಮ ಪ್ರದರ್ಶನ ಬರಲಿಲ್ಲ.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಮೊದಲ ಇನ್ನಿಂಗ್ಸ್ 556/10
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 823/7
ಪಾಕಿಸ್ತಾನ ಎರಡನೇ ಇನ್ನಿಂಗ್ಸ್ 220/10