ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಷಿಪ್ ಟೂರ್ನಿಯ ಮೂರನೇ ಆವೃತ್ತಿಯ ಭಾಗವಾಗಿ ಭಾರತ ತಂಡ ಆಸ್ಟ್ರೇಲಿಯಾ ಎದುರು ಬರೋಬ್ಬರಿ 5 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಆಡಲಿದೆ. ಪ್ರತಿಷ್ಠೀತ ಬಾರ್ಡರ್ ಗವಾಸ್ಕರ್ ಟ್ರೋಫಿ ಸಲುವಾಗಿ ಈ ಸರಣಿ ನಡೆಯಲಿದ್ದು, ಕಾಂಗರೂ ನಾಡಲ್ಲಿ 4 ದಶಕಗಳ ಬಳಿಕ ಭಾರತ ತಂಡ ಇದೇ ಮೊದಲ ಬಾರಿ ಐದು ಪಂದ್ಯಗಳ ಸರಣಿಯಲ್ಲಿ ಪೈಪೋಟಿ ನಡೆಸಲು ಮುಂದಾಗಿದೆ.
ಅನುಭವಿ ಆರಂಭಿಕ ಬ್ಯಾಟರ್ 37 ವರ್ಷದ ರೋಹಿತ್ ಶರ್ಮಾ, ಇತ್ತೀಚೆಗಷ್ಟೇ ತಾಯ್ನಾಡಿನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡಕ್ಕೆ 2-0 ಅಂತರದ ಕ್ಲೀನ್ ಸ್ವೀಪ್ ಗೆಲುವು ತಂದುಕೊಟ್ಟಿದ್ದರು. ಇದೀಗ ಪ್ರವಾಸಿ ನ್ಯೂಜಿಲೆಂಡ್ ಎದುರು ಅಕ್ಟೋಬರ್ 16ರಂದು ಶುರುವಾಗಲಿರುವ 3 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಗೆ ತಯಾರಿ ನಡೆಸುತ್ತಿದೆ. ಅದರೆ, ರೋಹಿತ್ ಶರ್ಮಾ ಕೆಲ ವೈಯಕ್ತಿಕ ವಿಚಾರಗಳ ಕಾರಣ ಆಸ್ಟ್ರೇಲಿಯಾ ವಿರುದ್ಧದ ಪರ್ತ್ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ
ಇನ್ನು ಪರ್ತ್ ಟೆಸ್ಟ್ ಬಳಿಕ ಭಾರತ ತಂಡ ಆಸೀಸ್ ಎದುರು ಡೇ-ನೈಟ್ ಟೆಸ್ಟ್ ಪಂದ್ಯವನ್ನು ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಡಿಸೆಂಬರ್ 6ರಿಂದ 10ರವರೆಗೆ ಆಡಲಿದೆ. ಸರಣಿಯ ಮೂರನೇ ಪಂದ್ಯ ಗಬ್ಬಾದಲ್ಲಿ ಡಿಸೆಂಬರ್ 14ರಂದು ಶುರುವಾಗಲಿದೆ. ನಂತರ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಡಿಸೆಂಬರ್ 26ರಂದು ಇತಿಹಾಸ ಪ್ರಸಿದ್ಧ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಶುರುವಾಗಲಿದೆ. ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜನವರಿ 3ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಆರಂಭವಾಗಲಿದೆ.