ಮ್ಯಾಡ್ರಿಡ್: ಟೆನಿಸ್ನ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರಾದ ರಾಫೆಲ್ ನಡಾಲ್ (Rafael Nadal) ಅವರು ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದಾರೆ. 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಅವರು ಟೆನಿಸ್ಗೆ ವಿದಾಯ ಹೇಳಿದ್ದಾರೆ.
ಸ್ಪ್ಯಾನಿಷ್ ದಂತಕಥೆ ನಡಾಲ್, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊದ ಮೂಲಕ ನಿವೃತ್ತಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅವರ ವೃತ್ತಿಜೀವನದುದ್ದಕ್ಕೂ ಬೆಂಬಲ ನೀಡಿದವರು ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ನವೆಂಬರ್ನಲ್ಲಿ ಮಲಗಾದಲ್ಲಿ ನಡೆಯಲಿರುವ ಡೇವಿಸ್ ಕಪ್ ಫೈನಲ್ ಮ್ಯಾಚ್, ನಡಾಲ್ ಅವರ ಅಂತಿಮ ಪಂದ್ಯಾವಳಿಯಾಗಿದೆ. ನವೆಂಬರ್ 19 ಮತ್ತು 21 ರ ನಡುವಿನ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಅನ್ನು ಸ್ಪೇನ್ ಎದುರಿಸಲಿದೆ.
ಈ ವರ್ಷದ ಆರಂಭದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ನ ನಂತರ ಅವರು ಅಂಕಣದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಾರೆ. 2004 ರಲ್ಲಿ, ಯುವ ನಡಾಲ್ ಸ್ಪೇನ್ಗೆ ಡೇವಿಸ್ ಕಪ್ ಪ್ರಶಸ್ತಿಯನ್ನು ಪಡೆಯಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಅನುಭವವನ್ನು ಅವರು ತಮ್ಮ ನಿವೃತ್ತಿ ಘೋಷಣೆಯಲ್ಲಿ ಉಲ್ಲೇಖಿಸಿದ್ದಾರೆ.
ರಾಫೆಲ್ ನಡಾಲ್ ಇದುವರೆಗೂ ಒಟ್ಟು 92 ಎಟಿಪಿ ಸಿಂಗಲ್ಸ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪೈಕಿ 36 ಮಾಸ್ಟರ್ಸ್ ಪ್ರಶಸ್ತಿಗಳಾಗಿರುವುದು ಇನ್ನೊಂದು ವಿಶೇಷ. ಇದಷ್ಟೇ ಅಲ್ಲದೇ ರಾಫೆಲ್ ನಡಾಲ್, ಸ್ಪೇನ್ ಪರ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಟೆನಿಸ್ ಇತಿಹಾಸದಲ್ಲೇ ಸಿಂಗಲ್ಸ್ ವಿಭಾಗದಲ್ಲಿ ಗೋಲ್ಡನ್ ಗ್ರ್ಯಾನ್ ಸ್ಲಾಂ ಜಯಿಸಿದ ಕೇವಲ ಮೂರು ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಗೋಲ್ಡನ್ ಗ್ರ್ಯಾನ್ ಸ್ಲಾಂ ಅಂದರೆ ಟೆನಿಸ್ ಸಿಂಗಲ್ಸ್ನಲ್ಲಿ ಒಂದೇ ವರ್ಷದಲ್ಲಿ 4 ಗ್ರ್ಯಾನ್ ಸ್ಲಾಂ ಹಾಗೂ ಅದೇ ವರ್ಷ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಜಯಿಸಿದರೆ, ಅಂತಹ ಸಾಧನೆಯನ್ನು ಗೋಲ್ಡನ್ ಗ್ರ್ಯಾನ್ ಸ್ಲಾಂ ಎಂದು ಕರೆಯಲಾಗುತ್ತದೆ.