ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕೊನೆಗೂ ಮುಗಿದೆ. ಕಳೆದ ಒಂದು ವಾರದಿಂದ ನೆಡೆದ ವಾದ ಪ್ರತಿ ವಾದಕ್ಕೆ ಇಂದು ತೆರೆ ಬಿದ್ದಿದೆ…ಸದ್ಯಕ್ಕೆ ದಾಸನಿಗೆ ದಸರಾ ಭಾಗ್ಯ ಇಲ್ಲದಂತಾಗಿದ್ದು ಬಳ್ಳಾರಿ ಜೈಲ್ ಕಂಬಿಗಳ ಹಿಂದೆ ದಸರಾ ಮಾಡಬೇಕಿದೆ… ಇದು ದರ್ಶನ್ ಪರ ನೆಡೆದ ರೋಚಕ ವಾದ ಪ್ರತಿ ವಾದ ಹೇಗಿತ್ತು ಅನ್ನೋದನ್ನು ತೋರಸ್ತೀವಿ ನೋಡಿ..
Rain News: ಮುಂದಿನ 5 ದಿನ ಕರ್ನಾಟಕದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ!
ರೇಣುಕಾಸ್ವಾಮಿ ಹತ್ಯಯ ಪ್ರಮುಖ ರೋಪಿಗಳಾದ ನಟ ದರ್ಶನ್ ಹಾಗು ಪವಿತ್ರಾಗೌಡ ಸೇರಿ ಉಳಿದೆಲ್ಲಾ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ 57 ನೇ ಸಿಸಿಎಚ್ ಕೋರ್ಟ್ ನಲ್ಲಿ ಕಳೆದೊಂದು ವಾರದಿಂದಲೂ ರೋಚಕವಾಗಿ ವಾದ ಪ್ರತಿವಾದ ನಡೆದಿತ್ತು. ಅಂತೂ ಇಂತು ದರ್ಶನ್ ಬೇಲ್ ಅರ್ಜಿ ವಿಚಾರಣೆಗೆ ಇಂದು ತೆರೆ ಬಿದ್ದಿದೆ… ದರ್ಶನ್ ಪರ ವಕೀಲ ಸಿವಿ ನಾಗೇಶ್ ಪೊಲೀಸರ ತನಿಖೆಯಲ್ಲಿ ಲೋಪವನ್ನು ಎತ್ತಿಹಿಡಿದು, ಪೊಲೀಸರು ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆ ಎಂದು ವಾದಿಸಿದರು. ಇಂದು ವಾದ ಆರಂಭಿಸಿದ ಸಿವಿ ನಾಗೇಶ್, ಸಾಕ್ಷಿಗಳು, ಆರೋಪಿಗಳು ಒಂದೇ ಕಡೆ ಇದ್ದರು ಎನ್ನಲು ಸಾಕ್ಷಿಯಾಗಿ ನೀಡಲಾಗಿರುವ ಗೂಗಲ್ ನಕ್ಷೆ, ಸಾಕ್ಷಿಯ ಹೇಳಿಕೆಯನ್ನು 13 ದಿನ ತಡವಾಗಿ ದಾಖಲಿಸಿಕೊಂಡಿರುವುದು, ದರ್ಶನ್ರ ಶೂ ಇನ್ನೂ ಕೆಲವು ವಿಷಯಗಳ ಬಗ್ಗೆ ಪ್ರಮುಖವಾಗಿ ವಾದ ಮಂಡಿಸಿದರು.
ದರ್ಶನ್ ಶೂ ಹಾಗೂ ಪಟ್ಟಣಗೆರೆ ಶೆಡ್ನಲ್ಲಿ ವಶಪಡಿಸಿಕೊಂಡಿರುವ ಕೆಲವು ವಸ್ತುಗಳ ಮೇಲೆ ರಕ್ತದ ಕಲೆಗಳಿವೆ ಎಂದು ಪೊಲೀಸರ ಆರೋಪವನ್ನು ಅಲ್ಲಗಳೆದ ಸಿವಿ ನಾಗೇಶ್, ‘ಪೊಲೀಸರು ಪಂಚನಾಮೆ ಮಾಡಿದಾಗ ಅಲ್ಲಿದ್ದ ಯಾವ ವಸ್ತುವಿನ ಮೇಲೂ ರಕ್ತದ ಕಲೆ ಇರುವ ಬಗ್ಗೆ ದಾಖಲೆ ಇಲ್ಲ. ಆದರೆ ಎಫ್ಎಸ್ಎಲ್ ವರದಿಯಲ್ಲಿ ರಕ್ತದ ಕಲೆ ಪತ್ತೆ ಆಗಿದ್ದು ಹೇಗೆ?’ ಎಂದು ಪ್ರಶ್ನೆ ಮಾಡಿದರು. ದರ್ಶನ್ ಶೂನಲ್ಲಿ ಮಣ್ಣು ಸಂಗ್ರಹಿಸಲಾಗಿದ್ದು ಅದು ಪಟ್ಟಣಗೆರೆ ಶೆಡ್ನ ಮಣ್ಣು ಎಂದು ವರದಿ ಬಂದಿರುವ ಬಗ್ಗೆ ಮಾತನಾಡಿ, ದರ್ಶನ್ ಅದೇ ಶೇಡ್ನಲ್ಲಿ ಸಿನಿಮಾ ಶೂಟಿಂಗ್ ಮಾಡಿದ್ದರು.
ಹಾಗಾಗಿ ಆಗ ಸೇರಿದ್ದ ಮಣ್ಣು ಅದಿರಬಹುದು ಎಂದರು.ದರ್ಶನ್ಗೆ ರೇಣುಕಾ ಸ್ವಾಮಿ ಬಗ್ಗೆ ಮೊದಲೇ ತಿಳಿದಿತ್ತು ಎಂಬ ಆರೋಪದ ಬಗ್ಗೆಯೂ ವಾದ ಮಂಡಿಸಿದ ಸಿವಿ ನಾಗೇಶ್, ದರ್ಶನ್ ಹಾಗೂ ಪವಿತ್ರಾರ ಸಂಬಂಧ ಹದಗೆಟ್ಟಿತ್ತು, ಅವರ ನಡುವೆ ಪವನ್ ಕೊಂಡಿಯಾಗಿದ್ದ. ಪವನ್ರೇಣುಕಾಸ್ವಾಮಿ ಬಗ್ಗೆ ತಿಳಿದಿದ್ದೇ ಜೂನ್ 5 ರಂದು, ಹಾಗಿದ್ದ ಮೇಲೆ ದರ್ಶನ್ಗೆ ರೇಣುಕಾ ಸ್ವಾಮಿ ಬಗ್ಗೆ ಹೇಗೆ ತಿಳಿಯಲು ಸಾಧ್ಯ? ಹಾಗೂ ಸಾಕ್ಷ್ಯ ಮುಚ್ಚಿ ಹಾಕಲು 40 ಲಕ್ಷ ಹಣ ಇಟ್ಟುಕೊಳ್ಳಲು ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡಿದ್ರು.
ಇನ್ನು ಜೂನ್ 11 ರಂದು ಪಟ್ಟಣಗೆರೆ ಶೆಡ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಅದಕ್ಕೆ ಜೂನ್ 12 ರಂದು ಪ್ರವೇಶ ಮಾಡಿದ್ದಾರೆ ಅದೇಕೆ? ನನ್ನ ಪ್ರಕಾರ ಜೂನ್ 09 ರಂದೇ ಪಟ್ಟಣಗೆರೆ ಶೆಡ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮೂರು ದಿನಗಳ ಕಾಲ ತಡವಾಗಿ ಶೆಡ್ಗೆ ಹೋಗಿ ವಸ್ತುಗಳನ್ನು ರಿಕವರಿ ಮಾಡಿದ್ದು ಏಕೆ? ಮರದ ಕೊಂಬೆಗಳ ಮೇಲಿದ್ದ ರಕ್ತದ ಕಲೆ ಅಳಿಸಿ ಹೋಗಿದ್ದು ಏಕೆ? ಈ ವಿಷಯಗಳಿಗೆ ಎಸ್ಪಿಪಿ ಬಳಿ ಉತ್ತರವಿಲ್ಲ ಇನ್ನು ಶೆಡ್ನಲ್ಲಿ ಸಂಗ್ರಹಿಸಿದ 96 ವಸ್ತುಗಳ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಕೋರ್ಟ್ ಗೆ ತಿಳಿಸಿದ್ರು.
ದೇಹದ ಪಂಚನಾಮೆ ನಡೆಸಿದಾಗ ವೃಷಣದಲ್ಲಿ ಆಗಿರುವ ಗಾಯದ ಬಗ್ಗೆ ಉಲ್ಲೇಖ ಆಗಿಲ್ಲ. ದೇಹದಲ್ಲಿ ಆಗಿರುವ ಬೇರೆ ಬೇರೆ ಗಾಯದ ಬಗ್ಗೆ ಉಲ್ಲೇಖಗಳಿವೆ. ಬಲತೊಡೆಯ ಕೆಳಭಾಗದಲ್ಲಿ ರಕ್ತ ಹೆಪ್ಪುಗಟ್ಟಿದ ಗಾಯ ಇದೆ ಎಂದಿದೆ. ವೃಷ್ಣ ತೊಡೆಯ ಕೆಳಭಾಗದಲ್ಲಿ ಇರುತ್ತದೆಯೇ?. ಎಸ್ಪಿಪಿ ಪ್ರಸನ್ನ ಕುಮಾರ್ ಅವರು, ಇದು ರಕ್ತಚರಿತ್ರೆ ಎಂದಿದ್ದಾರೆ. ಪಂಚನಾಮೆಯಲ್ಲಿ ರಕ್ತವೇ ಸಿಕ್ಕಿಲ್ಲ ಹಾಗಿದ್ದ ಮೇಲೆ ಇದು ರಕ್ತಚರಿತ್ರೆ ಹೇಗಾಗುತ್ತದೆ’ ಎಂದು ಪ್ರಶ್ನೆ ಮಾಡಿದ್ರು…ದರ್ಶನ್ಗೆ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಅವರನ್ನು ನಂಬಿ ಕೆಲವು ನಿರ್ಮಾಪಕರು ಕೋಟ್ಯಂತರ ಹಣ ಹೂಡಿದ್ದಾರೆ. ಅವರು ಸಿನಿಮಾ ಮಾಡಿದರೆ 500 ಕುಟುಂಬಗಳಿಗೆ ಅನ್ನಕ್ಕೆ ದಾರಿಯಾಗುತ್ತದೆ. ಇದೆಲ್ಲ ಕಾರಣಗಳನ್ನು ಪರಿಗಣಿಸಿ ದರ್ಶನ್ಗೆ ಜಾಮೀನು ಮಂಜೂರು ಮಾಡಬೇಕು ಎಂದು ದರ್ಶನ್ ಪರ ವಕೀಲರು ವಾದ ಮುಕ್ತಾಯ ಮಾಡಿದ್ರು..
ಜೂನ್ 9ರಂದು ಆರೋಪಿ ಇರುವ ಸ್ಥಳದ ಬಗ್ಗೆ ಗೂಗಲ್ ನಕ್ಷೆ ಅಥವಾ ಸ್ಯಾಟಲೈಟ್ ಚಿತ್ರವನ್ನ ತೋರಿಸಿದ್ದಾರೆ.. ಪರಿಶೀಲಿಸಿದಾಗ ಪೊಲೀಸರು ಗೂಗಲ್ ಮ್ಯಾಪ್ ತೆಗೆದುಕೊಂಡು ಅಂಟಿಸಿ ನಕ್ಷೆ ತಯಾರಿಸಿರುವುದು ಗೊತ್ತಾಯಿತು. ಮಧ್ಯೆ ಪ್ರವೇಶಿಸಿದ ನ್ಯಾಯಾಧೀಶರು ನಕ್ಷೆಯ ಕೆಳಗೇ ಅದನ್ನು ಬರೆದಿದ್ದಾರೆ. ಲೊಕೇಷನ್ ಆಧಾರದಲ್ಲಿ ಇದನ್ನು ಸಿದ್ದಪಡಿಸಿಲಾಗಿದೆ ಎಂದು ಪೊಲೀಸರೇ ಬರೆದಿದ್ದಾರೆ ಎಂದರು.ತನಿಖಾಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ನಕ್ಷೆಯನ್ನ ಸಿದ್ದಪಡಿಸಿದ್ದಾರೆ. ಇದು ಗೂಗಲ್ ಪಿಚ್ಚರ್ ಅಲ್ಲ ಸ್ಯಾಟಲೈಟ್ ಪಿಚ್ಚರ್ ಅಲ್ಲ. ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಅಂಟಿಸಿದ ಚಿತ್ರವಾಗಿದೆ.
ಗೂಗಲ್ ವಿಳಾಸ ಪಡೆದಿಲ್ಲ. ಕರೆ ವಿವರ ಸಂಗ್ರಹಿಸಿಲ್ಲ. ಅದ್ಯಾವುದೂ ಇಲ್ಲದೇ ಈ ಸಾಕ್ಷಿಗಳು ಕೃತ್ಯದ ಸ್ಥಳದಲ್ಲಿದ್ದರೆಂದು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದರು.ಇದೇ ಟವರ್ ಲೊಕೇಷನ್ ವ್ಯಾಪ್ತಿಯಲ್ಲಿಯೇ ಆರೋಪಿಗಳ ವಾಸಸ್ಥಾನವಿದೆ.ಹೀಗಿರುವುದರಿಂದ ಕೃತ್ಯ ನಡೆದಾಗ ಇವರೆಲ್ಲಾ ಷೆಡ್ ನಲ್ಲಿದ್ದರೆಂದು ಸಾಬೀತಾಗುವುದಿಲ್ಲ.ಐಪಿ ಅಡ್ರೆಸ್ ಮೂಲಕ ಇರುವ ಸಿಟಿ ಮಾತ್ರ ತೋರಿಸಬಹುದು… ನಾನು ಈಗ ನ್ಯೂಯಾರ್ಕ್ ನಲ್ಲಿರುವಂತೆಯೂ ತೋರಿಸಬಹುದು.ತಾಂತ್ರಿಕ ವರದಿಗಳ ಪ್ರಕಾರ 5 ಮೈಲಿಗಳಿಂದ 25 ಮೈಲಿಗಳವರೆಗೂ ಇದರ ವ್ಯಾಪ್ತಿಯಿದೆ.ಹೀಗಿದ್ದಾಗ ಪಟ್ಟಣಗೆರೆ ಶೆಡ್ ನಲ್ಲೇ ಇವರೆಲ್ಲರೂ ಇದ್ದರೆಂದು ಹೇಳುವುದು ಹೇಗೆ ? ಪ್ರಶ್ನಿಸಿದರು.
ರೇಣುಕಾಸ್ವಾಮಿ ಕೊಲೆಯಾದಾಗ ಸಾಕ್ಷಿಗಳು ಅಲ್ಲಿಯೇ ಇದ್ದರೆಂದು ಹೇಳುವುದು ಹೇಗೆ ? ಆರೋಪಿಗಳು ಅಲ್ಲಿಯೇ ಇದ್ದರೆಂದು ಐಪಿ ಅಡ್ರೆಸ್ ಮೂಲಕವೂ ಹೇಳುವುದಕ್ಕೆ ನಂಬಲು ಸಾಧ್ಯನಾ.ನಾನು ಕಚೇರಿಯಿಂದ ನೇರವಾಗಿ ಈ ಕೋರ್ಟ್ ಗೆ ಬಂದಿದ್ದೇನೆ. ಆದರೆ ನಾನು ನನ್ನ ಕಚೇರಿಯಿಂದ ಎಸಿಪಿ ಚಂದನ್ ಕುಮಾರ್ ಕಚೇರಿಗೆ. ನಂತರ ವಿಧಾನಸೌಧಕ್ಕೆ ಹೋಗಿದ್ದಾಗಿ ಎಡಿಟ್ ಮಾಡಬಹುದು…. ಗೂಗಲ್ ಮ್ಯಾಪ್ ಅನ್ನು ಎಡಿಟ್ ಮಾಡಲೂ ಅವಕಾಶವಿದೆ ಎಂದು ವಿವರಿಸಿದರು.ಪ್ರತ್ಯಕ್ಷ ಸಾಕ್ಷಿಯೋರ್ವರು ಮಲೆಮಹದೇಶ್ವರ ಬೆಟ್ಟ, ಗೋವಾ, ತಿರುಪತಿಗೆ ಹೋಗಿದ್ದ. ಹೀಗಾಗಿ ಅವನ ಹೇಳಿಕೆ ದಾಖಲಿಸಲು ವಿಳಂಬವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇವರ ಹೇಳಿಕೆಯು ಗಣೇಶ-ಸುಬ್ರಹ್ಮಣ್ಯ ನ ಕಥೆಯಂತಿದೆ. ಪ್ರಪಂಚ ಸುತ್ತಿ ಬರಲು ಹೇಳಿದಾಗ ಸುಬ್ರಹ್ಮಣ್ಯ ಎಲ್ಲವನ್ನೂ ಸುತ್ತಿ ಬಂದರೆ. ಗಣೇಶ ಶಿವ ಪಾರ್ವತಿ ಮಾತ್ರ ಸುತ್ತಿದನಂತೆ. ಈ ಕೇಸಿನ ಸಾಕ್ಷಿಯ ಕಥೆಯೂ ಹೀಗೇ ಇದೆ ಈತ ಎಲ್ಲೂ ಹೋಗಿರಲಿಲ್ಲ.ಇವರೇ ಅವನು ಸುತ್ತಾಡಿದಂತೆ ತೋರಿಸಿದ್ದಾರೆ ಎಂದು ವಾದಿಸಿದರು.
ಪಟ್ಟಣಗೆರೆ ಶೆಡ್ ನಲ್ಲಿ ಮಣ್ಣಷ್ಟೇ ಅಲ್ಲ ರಕ್ತದ ಕಲೆಯು ಸಿಕ್ಕಿದೆ. ಮನೆಯಲ್ಲಿ ಶೂ ಇಟ್ಟ ಬಗ್ಗೆ ದರ್ಶನ್ ಸ್ವ ಇಚ್ಚಾ ಹೇಳಿಕೆ ನೀಡಿದ್ದಾರೆ. ನಂತರ ಪತ್ನಿ ಮನೆಯಲ್ಲಿ ಪೊಲೀಸರು ಶೂ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಹಾಗೂ ಸಾಕ್ಷಿಗಳ ಕರೆ ದತ್ತಾಂಶ ವಿಶ್ಲೇಷಿಸಲಾಗಿದೆ. ಸುಮಾರು 10 ಸಾವಿರ ಪುಟಗಳ ಸಿಡಿಆರ್ ದತ್ತಾಂಶ ವಿಶ್ಲೇಷಣೆ ಮಾಡಲಾಗಿದೆ. ತನಿಖಾಧಿಕಾರಿಗಳ ಕರ್ತವ್ಯವಾಗಿರುವುದರಿಂದ ಸಿಡಿಆರ್ ಹಾಗೂ ಟವರ್ ಲೋಕೆಷನ್ ಮ್ಯಾಪ್ ಸಿದ್ಧಪಡಿಸಿದ್ದಾರೆ. ನಾವಿರುವ ಸ್ಥಳದ ನಿಖರತೆ ಬಗ್ಗೆ ತಂತ್ರಜ್ಞಾನದಿಂದ ಪತ್ತೆ ಹಚ್ಚಬಹುದಾಗಿದೆ. ಕೇವಲ 5 ಮೀಟರ್ ವ್ಯತ್ಯಾಸವಾಗಬಹುದಾಗಿದೆ.
ತಂತ್ರಜ್ಞಾನ ತುಂಬಾ ಅಭಿವೃದ್ದಿಯಾಗಿದೆ ಹೀಗಾಗಿ ವ್ಯಕ್ತಿಯ ಇರುವಿಕೆಯ ಸ್ಥಳದ ನಿಖರತೆ ಪತ್ತೆಹಚ್ಚಬಹುದಾಗಿದೆ ಎಂದರು.ಎ 14 ಪ್ರದೂಶ್ ಸಾಕ್ಷಿ ನಾಶ ಮಾಡಲು ಗೂಗಲ್ ಸರ್ಚ್ ಮಾಡಿದ್ದಾನೆ ಕೃತ್ಯದಲ್ಲಿ ಭಾಗಿಯಾಗಿಲ್ಲವೆಂದರೆ ಯಾಕೆ ಗೂಗಲ್ ಸರ್ಚ್ ಮಾಡುತ್ತಿದ್ದ ಎಂದು ಪ್ರಶ್ನಿಸಿದರು. 10 ಸಾವಿರ ಪುಟಗಳನ್ನ ಕೊಡುವ ಬದಲು ಸುಲಭವಾಗಿ ಅರ್ಥವಾಗಲು ನಕ್ಷೆ ತಯಾರಿಸಿದ್ದಾರೆ. ತಾಂತ್ರಿಕ ಸಾಕ್ಷಿಗಳು ತನಿಖೆ ಹಾಗೂ ಆರೋಪಪಟ್ಟಿ ಪ್ರಮುಖ ಭಾಗವಾಗಿದೆ. 2020-21 ರಲ್ಲಿ ಶೆಡ್ ನಲ್ಲಿ ದರ್ಶನ್ ಸಿನಿಮಾ ಚಿತ್ರೀಕರಣವಾಗಿದೆ. ಐಪಿ ವಿಳಾಸ ಆಧಾರದ ಮೇರೆಗೆ ತನಿಖೆ ನಡೆಸಿಲ್ಲ..
ಹೇಮಂತ್ ಹೆಸರಿನಲ್ಲಿ ದರ್ಶನ್ ಸಿಮ್ ಬಳಸುತ್ತಿದ್ದಾರೆ ಎಂದು ಆರೋಪಿ ಪರ ವಕೀಲರು ವಾದಿಸಿದ್ದಾರೆ. ಪವಿತ್ರಾಗೌಡನೊಂದಿಗೆ ಚಾಟ್ ಮಾಡಿರುವುದೆಲ್ಲವೂ ಹೇಮಂತ್ ಎಂದು ಹೇಳುತ್ತಿದ್ದಾರೆ. ದರ್ಶನ್ ಹಾಗು ಪವಿತ್ರಾ ನಡುವಿನ ಚಾಟ್ ನಲ್ಲಿ ಮಿಸ್ ಯು ಹೆಂಡ್ತಿ..ಯೂ ಆರ್ ಮೋಸ್ಟ್ ಇಂಪಾರ್ಟೆಂಟ್ ಆಫ್ಮೈ ಲೈಫ್ ಸುಬ್ಬಾ ಐ ಯಾಮ್ ಆಲ್ವೇವ್ ವಿತ್ ಯು..ಹೀಗೆ ಹಲವು ಮೇಸೆಜ್ ಬಂದಿವೆ ಇವುಗಳನ್ನ ಹೇಮಂತ್ ಮಾಡಿದ್ದಾರಾ..?.ಅದು ದರ್ಶನ್ ದೇ ನಂಬರ್..17/05 ರಂದು ಹ್ಯಾಪಿ ಆನಿವರ್ಸರಿ ಎಂದು ಪವಿತ್ರಾಗೌಡ ಮೆಸೇಜ್ ಮಾಡ್ತಾರೆ.ನಂತರ 8/05ರಂದು ಕಾಂಟ್ಯಾಕ್ಟ್ ಬ್ಲಾಕ್ ಆಗತ್ತೆ.ಮೇ ತಿಂಗಳಲ್ಲಿ ಕೇವಲ ಮೂರು ದಿನ ಮಾತ್ರ ಕಾಂಟ್ಯಾಕ್ಟ್ ಇರಲಿಲ್ಲ…
ಮತ್ತೆ ಚಾಟ್ ಗಳು ಪ್ರಾರಂಭವಾಗಿವೆ ಎಂದು ಎಸ್ಪಿಪಿ ಕೋರ್ಟ್ ಗೆ ತಿಳಿಸಿದ್ರು.ಇನ್ನು ಬಿಲಿಯೇನರ್ ಬಳಿ ಸಾವಿರಾರು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ ಎಂಬ ಮಾತ್ರಕ್ಕೆ ಜಾಮೀನು ನೀಡಲಾಗಲ್ಲ. ಉದ್ಯಮಿ ಸುಬ್ರತಾ ರಾಯ್ ಗೆ ಸುಪ್ರೀಂಕೋರ್ಟ್ ಜಾಮೀನು ನೀಡಿರಲಿಲ್ಲ. ಹೀಗಾಗಿ ದರ್ಶನ್ ಗೆ ಜಾಮೀನು ನೀಡಬಾರದೆಂದು ಎಸ್ಪಿಪಿ ಕೋರ್ಟ್ ಗೆ ಮನವಿ ಮಾಡಿದರು.
ಪೊಲೀಸರ ಪರ ಎಸ್ಪಿಪಿ ಪ್ರಸನ್ನಕುಮಾರ್ ಹಾಗೂ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಅವರು ಸುದೀರ್ಘ ವಾದ-ಪ್ರತಿವಾದ ಆಲಿಸಿದ 57ನೇ ಸಿಸಿಎಚ್ ನ್ಯಾಯಾಲಯದ ನ್ಯಾ.ಜೈಶಂಕರ್ ಅ.14ಕ್ಕೆ ದರ್ಶನ್ ಜಾಮೀನು ಅರ್ಜಿಯ ಆದೇಶ ಕಾಯ್ದಿರಿಸಿದ್ದಾರೆ. ಇದೇ ಪ್ರಕರಣದಲ್ಲಿ ಆರೋಪಿಗಳಾದ ಪವಿತ್ರಾಗೌಡ, ರವಿ, ನಾಗರಾಜ್, ಲಕ್ಷ್ಮಣ್ ಹಾಗೂ ದೀಪಕ್ ಜಾಮೀನು ಆದೇಶ ಕೂಡ ಇದೇ ದಿನವೇ ಬರಲಿದೆ. ದರ್ಶನ್ & ಗ್ಯಾಂಗ್ ಗೆ ಸೋಮವಾರ ಜಾಮೀನು ಸಿಗುತ್ತಾ ಇಲ್ವಾ ಅನ್ನೋದನ್ನು ಕಾದುನೋಡಬೇಕಿದೆ…