ವಿಜಯದಶಮಿಗೆ ಕೌಂಟ್ ಡೌನ್ ಆರಂಭವಾಗಿದ್ದು ಹಬ್ಬಕ್ಕೆ ಹಣ್ಣು-ಹೂವಿನ ಬೆಲೆ ದುಬಾರಿಯಾಗಿದೆ. ಹೂವಿನ ಬೆಲೆ ಕೇಳಿ ಗ್ರಾಹಕರು ಶಾಕ್ ಆಗುತ್ತಿದ್ದಾರೆ. ಹಬ್ಬಕ್ಕೆ ಬೇಕಾದ ಬಹುಬೇಡಿಕೆಯ ಬೂದುಗುಂಬಳ, ನಿಂಬೆಹಣ್ಣು, ಬಾಳೆಹಣ್ಣು ಮತ್ತಿತರ ಪೂಜಾ ಸಾಮಗ್ರಿಗಳು ಈಗಾಗಲೇ ಮಾರುಕಟ್ಟೆಗೆ ಬಂದಿದ್ದು, ಬೆಲೆಗಳು ಕೂಡ ದುಬಾರಿಯಾಗಿವೆ.
ಸಾಮಾನ್ಯವಾಗಿ ದಸರಾ ಹಬ್ಬದಲ್ಲಿ ವಾಹನಗಳು, ಮಳಿಗೆಗಳು, ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸುವಾಗ ದೃಷ್ಟಿ ನಿವಾರಣೆಗಾಗಿ ಬೂದುಗುಂಬಳ, ನಿಂಬೆಹಣ್ಣುಗಳನ್ನು ಬಳಸುವುದು ವಾಡಿಕೆ. ಇವು ಈಗಾಗಲೇ ಲೋಡ್ಗಟ್ಟಲೆ ಮಾರುಕಟ್ಟೆಗೆ ಬಂದಿವೆ. ಕರ್ನಾಟಕದಿಂದ ಮಾತ್ರವಲ್ಲದೆ ಆಂಧ್ರ, ತಮಿಳುನಾಡು ಭಾಗಗಳಿಂದಲೂ ಆಗಮಿಸಿವೆ.
ಇದರ ಜತೆಗೆ ಬಾಳೆಕಂದು, ಅರಿಶಿನ, ಕುಂಕುಮಕ್ಕೂ ಬೇಡಿಕೆ ಹೆಚ್ಚಾಗಿದೆ. ನಿಂಬೆಹಣ್ಣು ಒಂದಕ್ಕೆ 8 ರೂ. ಇದ್ದರೆ, ಬೂದುಗುಂಬಳ ಒಂದು ಕಾಯಿಗೆ 40-50 ರೂ. ಗೆ ಏರಿಕೆಯಾಗಿದೆ. ಒಂದು ಕೆ.ಜಿ.ಗೆ 30 ರೂ. ಬೆಲೆಯಿದೆ. ಸಮಾಧಾನದ ಸಂಗತಿಯೆಂದರೆ ಹೂವಿನ ದರ ಮಾತ್ರ ಕೊಂಚ ಇಳಿಕೆಯಾಗಿದೆ. ಸೇವಂತಿಗೆ ಹೂವು ಕೆ.ಜಿ.ಗೆ 150 ರೂ. ಇದೆ. ಹಬ್ಬಕ್ಕೆ ಬೆಲೆಗಳು ಏರಿಕೆಯಾಗುವ ಹಿನ್ನೆಲೆಯಲ್ಲಿಈಗಲೇ ಖರೀದಿ ಆರಂಭವಾಗಿದೆ. ಕಡ್ಲೆಪುರಿ ಹಾಗೂ ಇತರೆ ಪೂಜಾ ಸಾಮಗ್ರಿಗಳ ಮಾರಾಟ ಕೂಡ ಆರಂಭವಾಗಿದೆ.
ಹಾಪ್ಕಾಮ್ಸ್ನಲ್ಲಿನ ದರ (ಕೆಜಿಗಳಲ್ಲಿ)
- ನಿಂಬೆಹಣ್ಣು 195 ರೂ.
- ಬೂದುಗುಂಬಳ 30 ರೂ.
- ಬಾಳೆಎಲೆ 12 ರೂ.
- ತೆಂಗಿನಕಾಯಿ ದಪ್ಪ 47 ರೂ.
- ತೆಂಗಿನಕಾಯಿ ಮಧ್ಯಮ 40 ರೂ.
- ತೆಂಗಿನಕಾಯಿ ಸಣ್ಣ 24 ರೂ.
- ಏಲಕ್ಕಿ ಬಾಳೆ 100 ರೂ.