ಕಾಳುಮೆಣಸಿಗೆ ಬೇಡಿಕೆ ಹೆಚ್ಚಿದರೂ ಆಫ್ ಸೀಸನ್ ಆದ ಕಾರಣ ಬೆಲೆ ಏರಿಕೆ ನಿರೀಕ್ಷೆಯಲ್ಲಿ ಬೆಳೆಗಾರರು ಮತ್ತು ಮಧ್ಯವರ್ತಿಗಳು ಮಾರಾಟಕ್ಕೆ ಮುಂದಾಗುತ್ತಿಲ್ಲ.
ಮಾರುಕಟ್ಟೆಗೆ ಕಾಳುಮೆಣಸಿನ ನಿಧಾನಗತಿಯ ಆಗಮನ ಉತ್ತರ ಭಾರತದ ಮಸಾಲೆ ಕಂಪೆನಿಗಳನ್ನು ಬೆಲೆ ಹೆಚ್ಚಿಸಲು ಪ್ರೇರೇಪಿಸಿದೆ. ಕೊಚ್ಚಿ ಮಾರುಕಟ್ಟೆಗೆ ತಲುಪುವ ಕಾಳುಮೆಣಸು 30 ಟನ್ಗೆ ಸೀಮಿತವಾಗಿದ್ದು, ಪ್ರತಿ ಕೆ.ಜಿ ಗಾರ್ಬಲ್ಡ್ ಕಾಳುಮೆಣಸು ದರ 666 ರೂ. ಹಾಗೂ ಅನ್ ಗಾರ್ಬಲ್ಸ್ ದರ 646 ರೂ.ಗೆ ಏರಿಕೆಯಾಗಿದೆ. ತಾಜಾ ಕಾಳುಮೆಣಸು 636 ರೂ.ಗೆ ಖರೀದಿಸಲಾಗುತ್ತಿದೆ.
ಪ್ರತಿ ಕೆಜಿ ಆರ್.ಎಸ್.ಎಸ್ – ಗ್ರೇಡ್ -4 ರಬ್ಬರ್ ಬೆಲೆ 224 ರೂ.ನಿಂದ 217 ರೂ.ಗೆ ಕುಸಿದಿದೆ. ಆದರೆ ವಿದೇಶಿ ಮಾರುಕಟ್ಟೆಯಲ್ಲಿ ರಬ್ಬರ್ ಬೆಲೆ ಹೆಚ್ಚಿದೆ. ಬ್ಯಾಂಕಾಕ್ನಲ್ಲಿ ಆರ್.ಎಸ್.ಎಸ್ ಗ್ರೇಡ್-4 ಲ್ಲಿ ರಬ್ಬರ್ಗೆ 252.49 ರೂ. ಬೆಲೆ ಇದೆ. ಕೇರಳದ ಈ ಬೆಲೆಗಿಂತ 31 ರೂ. ಹೆಚ್ಚಿದೆ. ತಿಂಗಳ ಹಿಂದೆ ಕೇರಳದಲ್ಲಿ ಬ್ಯಾಂಕಾಕ್ ಬೆಲೆಗಿಂತ 40 ರೂ. ಹೆಚ್ಚಿತ್ತು.
ಮಳೆ ಕಾರಣ ಏಲಕ್ಕಿ ಕಟಾವು ಮೂರು ತಿಂಗಳು ವಿಳಂಬವಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಏಲಕ್ಕಿ ದಾಸ್ತಾನು ಕಡಿಮೆಯಾಗಿದೆ. ಈಗ ಹೊಸ ಏಲಕ್ಕಿ ಮಾರುಕಟ್ಟೆಗೆ ತಲುಪುತ್ತಿರುವ ಕಾರಣ ಹರಾಜು, ಕೇಂದ್ರಗಳಲ್ಲಿ ವಹಿವಾಟಿನ ಪ್ರಮಾಣ ಹೆಚ್ಚಿದೆ. ಈ ಹಬ್ಬದ ಸೀಸನ್ ಆಗಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಏಲಕ್ಕಿ ಖರೀದಿ ಸಕ್ರಿಯವಾಗಿದೆ.