ಬೆಂಗಳೂರು: ನಮ್ಮದು ಅತಿಯಾದ ಆತ್ಮವಿಶ್ವಾಸ, ಅದನ್ನು ಬಿಟ್ಟು ಕೆಲಸ ಮೇಲೆ ವಿಶ್ವಾಸ ಇಡಬೇಕು ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ ಸುರೇಶ್ (DK Suresh) ಆತ್ಮಾವಲೋಕನ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹರಿಯಾಣ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ (Haryana Election Results) ಮುಡಾ ಪ್ರಕರಣ ಕಾರಣ ಎಂಬ ಮಾಹಿ ಸ್ಪೀಕರ್ ಕೋಳಿವಾಡ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು.
ಇದು ಜನರ ತೀರ್ಪು, ಹರಿಯಾಣದಲ್ಲಿ (Haryana) ನಮ್ಮ ಪಕ್ಷಕ್ಕೆ ಹಿನ್ನಡೆ ಆಗಿದೆ. ಲೋಕಸಭೆ, ವಿಧಾನಸಭೆ ಫಲಿತಾಂಶಗಳೇ ಬೇರೆ, ವಿಧಾನಸಭೆ ಚುನಾವಣೆ ಫಲಿತಾಂಶವೇ ಬೇರೆ. ಒಂದು ರಾಜ್ಯಕ್ಕಿಂತ ಮತ್ತೊಂದು ವಿಭಿನ್ನವಾಗಿರುತ್ತವೆ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ನಮ್ಮದು ಅತಿಯಾದ ಆತ್ಮವಿಶ್ವಾಸ, ಅದನ್ನು ಬಿಟ್ಟು, ನಾವು ಕೆಲಸದ ಮೇಲೆ ವಿಶ್ವಾಸ ಇಡಬೇಕು ಎಂದು ಆತ್ಮಾವಲೋಕನ ಮಾಡಿಕೊಂಡರು.
ಇದೇ ವೇಳೆ ಸತೀಶ್ ಜಾರಕಿಹೊಳಿ, ಮಹದೇವಪ್ಪ, ಪರಮೇಶ್ವರ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ, ಪಕ್ಷದ ಅಧ್ಯಕ್ಷರು ಖರ್ಗೆಯವರನ್ನ ಭೇಟಿ ಮಾಡ್ತಾರೆ. ಅದಕ್ಕೆ ಬೇರೆ ಅರ್ಥ ಕೊಡೋಕೆ ಆಗುತ್ತಾ…? ಪಕ್ಷದ ಅಧ್ಯಕ್ಷರನ್ನಲ್ಲದೇ ಇನ್ಯಾರನ್ನ ಭೇಟಿ ಮಾಡೋಕೆ ಸಾಧ್ಯ? ಸರ್ಕಾರ ಅವರಾಗೇ ಬೀಳಿಸ್ತಾರೆಂಬ ಬಿಜೆಪಿ ಅಭಿಪ್ರಾಯ ಬ್ರಮೆ ಎಂದು ತಿವಿದಿದ್ದಾರೆ.
ಇನ್ನೂ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ದಿನಕ್ಕೊಂದು ಹೇಳಿಕೆ ಕೊಡಲ್ಲ. ನಾವು ಅವರನ್ನ ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ. ಅವರು ಏನೋ ಹೇಳಿಕೆ ಕೊಡಬೇಕು ಕೊಡ್ತಾರೆ. ಬೆಳಗ್ಗೆ ಒಂದು ಸಂಜೆ ಒಂದು ಹೇಳಿಕೆ ಕೊಡ್ತಾರೆ. ಅದಕ್ಕೆಲ್ಲ ನಾವು ಹೇಳಿಕೆ ಕೊಡೋಕೆ ಆಗುತ್ತಾ? ಎಂದು ಪ್ರಶ್ನೆ ಮಾಡಿದರು.