ಬೆಂಗಳೂರು: ಕಳೆದ ಮೂರು ವರ್ಷಗಳಿಂದಲೂ ಬೆಂಗಳೂರಿನ ಪೀಣ್ಯದಲ್ಲಿ ನಿಗೂಢವಾಗಿ ನೆಲೆಸಿದ್ದ ಪಾಕ್ ದಂಪತಿಯನ್ನು ಬಂಧಿಸಿರುವ ಬೆಂಗಳೂರು ಪೊಲೀಸರು ತನಿಖೆಯಲ್ಲಿ ಹಲವು ಸ್ಫೋಟಕ ಮಾಹಿತಿಗಳನ್ನು ಬಯಲಿಗೆಳೆದಿದ್ದಾರೆ.
ಇದೇ ಅಕ್ಟೋಬರ್ 3ರಂದು ಜಿಗಣಿ ಪೊಲೀಸರ ಬಲೆಗೆ ಬಿದ್ದಿದ್ದ ಪಾಕ್ ದಂಪತಿಯ ಬಗ್ಗೆ ಇದೀಗ ಬೆಂಗಳೂರು ನಗರ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ದಂಪತಿಯ ಪೂರ್ವಪರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೊಲೀಸರ ತನಿಖೆ ವೇಳೆ ಕೆಲವು ರೋಚಕ ವಿಚಾರಗಳು ಬೆಳಕಿಗೆ ಬಂದಿವೆ.
ಜಿಗಣಿ ಪೊಲೀಸರು ಇದೀಗ ದೇಶದಾದ್ಯಂತ ಸಕ್ರಿಯರಾಗಿದ್ದ 14 ಮಂದಿ ಪಾಕಿಸ್ತಾನೀಯರನ್ನು ಬಂಧಿಸಿದ್ದಾರೆ. ಇದರೊಂದಿಗೆ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಪಾಕ್ ಪ್ರಜೆಗಳ ಜಾಲ ಇನ್ನಷ್ಟು ವಿಸ್ತರಿಸಿರುವ ಆತಂಕ ಎದುರಾಗಿದೆ. ಬಂಧಿತರ ವಿಚಾರಣೆಯಿಂದ ಒಂದೊಂದಾಗಿ ಮಾಹಿತಿ ತಿಳಿದುಬರುವ ನಿರೀಕ್ಷೆ ಇದೆ.
14 ಮಂದಿಯ ಬಂಧನದೊಂದಿಗೆ ದೇಶದಲ್ಲಿ ಜಿಗಣಿ ಹಾಗೂ ಕರ್ನಾಟಕ ಪೊಲೀಸರು ಬಂಧಿಸಿದ ಪಾಕಿಸ್ತಾನಿ ಪ್ರಜೆಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಇವರೆಲ್ಲ ದೇಶದ ನಾನಾ ಭಾಗಗಳಲ್ಲಿ ಅಡಗಿ ಕುಳಿತಿದ್ದರು. ಪ್ರಕರಣದ ಕಿಂಗ್ಪಿನ್ ಪರ್ವೇಜ್ ಬಂಧನದ ಬೆನ್ನಲ್ಲೇ ಇನ್ನಿತರರು ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರಿನ ಪೀಣ್ಯದಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳ ಬಂಧನ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರಿಂದಲೂ ಹೆಚ್ಚಿನ ತನಿಖೆ ನಡೆಯುತ್ತಿದೆ. ಪೊಲೀಸರು ಬಂಧಿತ ದಂಪತಿಯ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ದಂಪತಿ ಕಳೆದ ಮೂರು ವರ್ಷಗಳಿಂದ ಪೀಣ್ಯದ ಆಂಧ್ರಹಳ್ಳಿ ಮುಖ್ಯರಸ್ತೆಯ ಮನೆಯಲ್ಲಿ ನಿಗೂಢವಾಗಿ ನೆಲೆಸಿದ್ದರು ಎಂಬುದು ಗೊತ್ತಾಗಿದೆ. ಮನೆಯಿಂದ ಹೊರ ಬಾರದೆ ಒಳಗಡೆಯೇ ನೆಲೆಸಿದ್ದರು ಎನ್ನಲಾಗಿದೆ. ಪಾಕ್ ಮೂಲದ ಸೈಯದ್, ಆತನ ಪತ್ನಿ ಹಾಗೂ ಮಗಳು ಹೆಸರು ಬದಲಿಸಿಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದರು. ಹೊರ ಜಗತ್ತಿನ ಸಂಪರ್ಕ ಇಲ್ಲದೆ ಗೌಪ್ಯವಾಗಿ ನೆಲೆಸಿದ್ದ ಮಾಹಿತಿ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ
2019ರಲ್ಲಿ ಬೆಂಗಳೂರಿಗೆ ಬಂದಿದ್ದ ಸೈಯದ್ ಮತ್ತು ಕುಟುಂಬ ಅಂದಿನಿಂದ ಧರ್ಮ ಪ್ರಚೋದಕರಾಗಿ ಕೆಲಸ ಮಾಡುತ್ತಿದ್ದರು. ಯೂಟ್ಯೂಬ್ನಲ್ಲಿ ಪ್ರಚಾರ ಕಾರ್ಯ ಮಾಡುತ್ತಾ ಇದ್ದರು. ಇವರು ಭಾರತಕ್ಕೆ 2014ರಲ್ಲೇ ಬಂದಿದ್ದರು. ನಕಲಿ ಹೆಸರಲ್ಲಿ ಆಧಾರ್ ಮಾಡಿಸಿಕೊಂಡಿದ್ದರು ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.