ವೆಸ್ಟ್ ಇಂಡೀಸ್ ಹಾಗೂ ಅಮೇರಿಕಾದ ಜಂಟಿ ಆತಿಥ್ಯದಲ್ಲಿ ಆಯೋಜನೆಗೊಂಡಿದ್ದ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ ಗಳಿಂದ ಮಣಿಸಿದ್ದ ರೋಹಿತ್ ಶರ್ಮಾ ಪಡೆ ಚಾಂಪಿಯನ್ ಪಟ್ಟ ಅಲಂಕರಿಸಿ ಅಭಿಮಾನಿಗಳನ್ನು ಸಂತಸದ ಅಲೆಯಲ್ಲಿ ತೇಲಿಸಿದ್ದರು.
ಈ ನಡುವೆ ರೋಹಿತ್ ಶರ್ಮಾ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಅವರು ರೋಹಿತ್ 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ದೈನಿಕ್ ಜಾಗರಣ್ ಜೊತೆಗೆ ದಿನೇಶ್ ಲಾಡ್ ಅವರು ರೋಹಿತ್ ಶರ್ಮಾ ಅವರ ನಿವೃತ್ತಿಯ ಕುರಿತು ಪ್ರಸ್ತಾಪಿಸಿದ್ದಾರೆ. ಐಸಿಸಿ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ನಂತರ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಗೆ ಬಹುಶಃ ವಿದಾಯ ಘೋಷಿಸಬಹುದು, ಆದರೆ ಏಕದಿನ ಕ್ರಿಕೆಟ್ ಗೆ ಬಹುಬೇಗ ನಿವೃತ್ತಿ ಘೋಷಿಸುವುದಿಲ್ಲ ಎಂದು ಹೇಳಿದ್ದಾರೆ.
“ಐಸಿಸಿ ಆಯೋಜನೆಯ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ನಂತರ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಿಸುತ್ತಾರೆ ಎಂಬುದನ್ನು ನಾನು ನಂಬುವುದಿಲ್ಲ. ಆದರೆ ಒಂದು ವೇಳೆ ಆತ ಈ ನಿರ್ಧಾರ ಪ್ರಕಟಿಸಲೂಬಹುದು. ಏಕೆಂದರೆ ಆತನಿಗೆ ವಯಸ್ಸು ಹೆಚ್ಚಾಗಿದ್ದು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ತೆಗೆದುಕೊಳ್ಳಬಹುದು,” ಎಂದು ರೋಹಿತ್ ಶರ್ಮಾರ ಬಾಲ್ಯದ ಕೋಚ್ ಹೇಳಿದ್ದಾರೆ