ಹರಿಯಾಣ:- ಹರಿಯಾಣ ಚುನಾವಣಾ ಫಲಿತಾಂಶಗಳು ಇಂದು ಹೊರಬಿದ್ದಿದ್ದು, ಆಡಳಿತಾರೂಢ ಭಾರತೀಯ ಜನತಾ ಪಕ್ಷ ಎಕ್ಸಿಟ್ ಪೋಲ್ ಸಮೀಕ್ಷೆಯನ್ನು ತಲೆಕೆಳಗಾಗಿಸಿದೆ. ಸತತ ಮೂರನೇ ಬಾರಿಗೆ ಬಿಜೆಪಿ ಅಭೂತಪೂರ್ವ ಗೆಲುವು ಕಂಡಿದೆ. ಸಧ್ಯ ಬಿಜೆಪಿಯು ಮ್ಯಾಜಿಕ್ ಸಂಖ್ಯೆ 46 ಸ್ಥಾನಗಳನ್ನು ದಾಟಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವಿನ ಹಾದಿಯಲ್ಲಿದೆ.
2014ರಲ್ಲಿ ಕೇವಲ 4 ಸ್ಥಾನ ಗಳಿಸಿದ್ದ ಬಿಜೆಪಿ ಇದೀಗ 47+ ಸ್ಥಾನಗಳಿಸಿದೆ. ಈ ಅಭೂತಪೂರ್ವ ಗೆಲುವಿನ ಹಿಂದೆ ಬಿಜೆಪಿಯ ತಂತ್ರ ಕೆಲಸ ಮಾಡಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಬಾರಿ ಬಿಜೆಪಿಯು ಹೊಸ ಪ್ರಯೋಗಕ್ಕೆ ಕೈಹಾಕಿ ಗೆಲುವು ಕಂಡಿದೆ. ಸಾಂಪ್ರದಾಯಿಕವಾಗಿ ನಿರೀಕ್ಷೆಗಳಿಗೆ ವಿರುದ್ಧವಾಗಿ, ಬಿಜೆಪಿ ಪ್ಲ್ಯಾನ್ ಮಾಡಿತ್ತು. ಏಕೆಂದರೆ ಈ ರಾಜ್ಯದಲ್ಲಿ ಜಾಟ್ ಸಮುದಾಯ 40 ಪ್ರತಿದಷ್ಟು ಇದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಈಗಾಗಲೇ ಆ ಸಮುದಾಯವನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು ಹಾಗಾಗಿ ಬಿಜೆಪಿ ಜಾಟೇತರ ಸಮುದಾಯದತ್ತು ಕಣ್ಣು ನೆಟ್ಟಿತ್ತು, ಅದರಂತೆ ಗೆಲುವು ಕೂಡ ಕಂಡಿದೆ.
ಕಾಂಗ್ರೆಸ್ ಹೆಚ್ಚಾಗಿ ಜಾಟ್ ಸಮುದಾಯವನ್ನು ಪಕ್ಷದತ್ತ ಸೆಳೆಯುವಲ್ಲಿ ಸಫಲವಾಗಿದೆ. ಆದರೆ, ಜಾಟೇತರ ಸಮುದಾಯಗಳನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಬಿಜೆಪಿಯು ಜಾಟ್ ಸಮುದಾಯವಲ್ಲದೆ ಉಳಿದ ಸಮುದಾಯಗಳನ್ನು ಗೆದ್ದುಕೊಂಡಿದೆ. ವಿಶೇಷವಾಗಿ ಪಂಜಾಬಿ, ಒಬಿಸಿ, ಅಹಿರ್, ಬ್ರಾಹ್ಮಣರು, ರಜಪೂತರು ಹಾಗೂ ಬನಿಯಾ ಮತಗಳನ್ನು ಸೆಳೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಪಂಜಾಬಿಗಳ ಪ್ರಾಬಲ್ಯವಿರುವ ಜಿಟಿ ರೋಡ್ ಪ್ರದೇಶ, ಅಹಿರ್ಗಳು ಪ್ರಾಬಲ್ಯವಿರುವ ಅಹಿರ್ವಾಲ್ ಪ್ರದೇಶ ಹಾಗೂ ಗುಜ್ಜರ್ ಪ್ರಾಬಲ್ಯವಿರುವ ಫರಿದಾಬಾದ್ನ ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ರಾಜ್ಯದಲ್ಲಿ ಬಿಜೆಪಿಯ ಮುಂದಾಳುಗಳು ಜಾಟ್ಯೇತರ ಸಮುದಾಯದವರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಪಂಜಾಬಿ ಸಮುದಾಯದವರು ಮತ್ತು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಒಬಿಸಿ ಸೈನಿ ಸಮುದಾಯದಿಂದ ಬಂದವರು. ಚುನಾವಣಾ ಪ್ರಚಾರದ ವೇಳೆ ಬಿಜೆಪಿ ವಿರುದ್ಧ ಜಾಟ್ ಸಮುದಾಯವು ಧ್ವನಿ ಎತ್ತಿದ್ದು ಬಿಜೆಪಿ ಪರವಾಗಿ ಜಾಟ್ಯೇತರ ಸಮುದಾಯಗಳ ಕ್ರೋಡೀಕರಣಕ್ಕೆ ಕಾರಣವೆಂದು ಹೇಳಲಾಗುತ್ತಿದೆ.