ICC T20 ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಟೂರ್ನಿಯ ಎರಡನೇ ಪಂದ್ಯದಲ್ಲಿ ಐಸಿಸಿಯ ನಿಯಮ ಉಲ್ಲಂಘಿಸಿದ ಟೀಂ ಇಂಡಿಯಾದ ಯುವ ವೇಗದ ಬೌಲರ್ ಅರುಂಧತಿ ರೆಡ್ಡಿ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕ್ರಮ ಕೈಗೊಂಡಿದ್ದು, ಶಿಕ್ಷೆ ವಿಧಿಸಿದೆ. ಇದರ ಪ್ರಕಾರ ಅರುಂಧತಿ ಮತ್ತೊಮ್ಮೆ ಈ ತಪ್ಪನ್ನು ಪುನರಾವರ್ತಿಸಿದರೆ, ಪಂದ್ಯದಿಂದ ನಿಷೇಧಕ್ಕೊಳಗಾಗುವ ಸಾಧ್ಯತೆಗಳಿವೆ.
ಮಂಗಳೂರು ಪೊಲೀಸರ ಭರ್ಜರಿ ಕಾರ್ಯಚರಣೆ: 6 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ!
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಅರುಂಧತಿ ರೆಡ್ಡಿ, ಪಾಕ್ ತಂಡದ ಮಾಜಿ ನಾಯಕಿ ನಿದಾ ದಾರ್ ಅವರನ್ನು ಔಟ್ ಮಾಡಿದ ನಂತರ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ನಿದಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದ ಅರುಂಧತಿ, ಅವರನ್ನು ಪೆವಿಲಿಯನ್ಗೆ ಹೋಗುವಂತೆ ಕೈ ಸನ್ನೆ ಮಾಡಿದ್ದರು. ಐಸಿಸಿ ನಿಯಮದ ಪ್ರಕಾರ ಪಂದ್ಯದ ವೇಳೆ ಯಾವುದೇ ಪ್ಲೇಯರ್ ಈ ರೀತಿಯ ವರ್ತನೆ ತೊರಿದರೆ ಅವರಿಗೆ ದಂಡ ವಿಧಿಸಲಾಗುತ್ತದೆ. ಅದರಂತೆ ಐಸಿಸಿ ನೀತಿ ಸಂಹಿತೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಅರುಂಧತಿ ಅವರನ್ನು ವಾಗ್ದಂಡನೆಗೆ ಗುರಿ ಪಡಿಸಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಐಸಿಸಿ, ‘ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.5 ಅನ್ನು ಉಲ್ಲಂಘಿಸಿದ್ದಕ್ಕಾಗಿ ಅರುಂಧತಿ ರೆಡ್ಡಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಯಾವುದೇ ಆಟಗಾರ ಔಟಾದಾಗ ಆಕ್ರಮಣಕಾರಿ ವರ್ತನೆ ತೋರುವುದು ಮತ್ತು ಅಂತರರಾಷ್ಟ್ರೀಯ ಪಂದ್ಯದ ವೇಳೆ ಅವಾಚ್ಯ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದನ್ನು ಈ ನಿಯಮ ಸೂಚಿಸುತ್ತದೆ. ಆ ಪ್ರಕಾರ ಐಸಿಸಿ ನಿಯಮ ಉಲ್ಲಂಘಿಸಿರುವ ಅರುಂಧತಿ ರೆಡ್ಡಿ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಕಳೆದ 24 ತಿಂಗಳ ಅವಧಿಯಲ್ಲಿ ಇದು ಅರುಂಧತಿ ಅವರ ಮೊದಲ ಅಪರಾಧವಾಗಿದೆ.
ನಿಯಮದ ಪ್ರಕಾರ 24-ತಿಂಗಳ ಅವಧಿಯಲ್ಲಿ ಆಟಗಾರನೊಬ್ಬ ನಾಲ್ಕು ಅಥವಾ ಹೆಚ್ಚಿನ ಡಿಮೆರಿಟ್ ಪಾಯಿಂಟ್ಗಳನ್ನು ಪಡೆದರೆ, ಆತನಿಗೆ ಅಧಿಕೃತ ವಾಗ್ದಂಡನೆಯ ಕನಿಷ್ಠ ದಂಡ, ಹಾಗೆಯೇ ಪಂದ್ಯದ ಶುಲ್ಕದ ಗರಿಷ್ಠ 50 ಪ್ರತಿಶತವನ್ನು ದಂಡವನ್ನಾಗಿ ಮತ್ತು ಒಂದು ಪಂದ್ಯದ ನಿಷೇಧವನ್ನೂ ಹೇರಲಾಗುತ್ತದೆ. ಆದಾಗ್ಯೂ, ಮೂರನೇ ಅಂಪೈರ್ ಜಾಕ್ವೆಲಿನ್ ವಿಲಿಯಮ್ಸ್ ಮತ್ತು ನಾಲ್ಕನೇ ಅಂಪೈರ್ ಕ್ಲೇರ್ ಪೊಲೊಸಾಕ್ ಜೊತೆಗೆ ಆನ್-ಫೀಲ್ಡ್ ಅಂಪೈರ್ಗಳಾದ ಎಲೋಯಿಸ್ ಶೆರಿಡನ್ ಮತ್ತು ಲಾರೆನ್ ಅಜೆನ್ಬಾಗ್ ಅವರು ವಿಧಿಸಿದ ಅಪರಾಧ ಮತ್ತು ಶಿಕ್ಷೆಯನ್ನು ಅರುಂಧತಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಯಾವುದೇ ವಿಚಾರಣೆಯ ಅಗತ್ಯವಿಲ್ಲವೆಂದು ಐಸಿಸಿ ತಿಳಿಸಿದೆ.