ಹೂಕೋಸಿನಲ್ಲಿ ವಿಟಮಿನ್ ಸಿ ಜೊತೆಗೆ ಫೋಲೇಟ್, ವಿಟಮಿನ್ ಬಿ 6, ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್ನಂತಹ ಖನಿಜಾಂಶಗಳು ಸಮೃದ್ಧವಾಗಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚಳಿಗಾಲದಲ್ಲಿ ಹೆಚ್ಚಾಗಿ ಲಭ್ಯವಿರುವುದರಿಂದ ವಿವಿಧ ರೀತಿಯ ಭಕ್ಷ್ಯಗಳಲ್ಲಿ ಹೂಕೋಸನ್ನು ಬಳಸಲಾಗುತ್ತದೆ. ಇದು ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳನ್ನು ಸಹ ಹೊಂದಿದೆ.
ವಿಶೇಷವಾಗಿ ಈ ತರಕಾರಿ ಕಡಿಮೆ ಪ್ರಮಾಣದ ಹಾಗೂ ಒಳ್ಳೆಯ ಕೊಬ್ಬಿನ ಅಂಶವನ್ನು ಒಳಗೊಂಡಿದ್ದು, ನಮ್ಮ ಹೃದಯದ ಆರೋಗ್ಯ ಕಾಪಾಡುವ ಗುಣಲಕ್ಷಣಗಳನ್ನು ಒಳಗೊಂಡಿದೆ. ಹಾಗಾಗಿ ವಾರಕ್ಕೆ ಒಮ್ಮೆ ಆದರೂ ಆಹಾರಪದ್ಧತಿಯಲ್ಲಿ ಹೂಕೋಸು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಫೈಬರ್ ಹೆಚ್ಚು: ಹೂಕೋಸು ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯಮಾಡುತ್ತದೆ. ದೀರ್ಘಕಾಲದ ಕಾಯಿಲೆ ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಜೀರ್ಣಕ್ರಿಯೆಗೆ ಸಹಾಯ: ಹೂಕೋಸು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಸಂಶೋಧನೆಯೊಂದರ ಪ್ರಕಾರ ,ಮಲಬದ್ಧತೆ , ಮೂಲವ್ಯಾಧಿ , ಕರುಳಿನ ಕ್ಯಾನ್ಸರ್ , ಗ್ಯಾಸ್ಟ್ರಿಕ್ ಹುಣ್ಣು , ಬೊಜ್ಜು ಮುಂತಾದ ಅನೇಕ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ.
ತೂಕ ಇಳಿಸಲು ಸಹಾಯ: ಹೂಕೋಸುವಿನಲ್ಲಿ ಫೈಬರ್ ಮತ್ತು ನೀರಿನ ಅಂಶ ಅಧಿಕವಾಗಿದೆ. ಹೀಗಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಬೊಜ್ಜು ತಡೆಯುತ್ತದೆ.ಇದರ ಜೊತೆಯಲ್ಲಿ ಹೂಕೋಸು ದೇಹದ ಚಯಾಪಚಯ ಕ್ರಿಯೆಗೆ ಅಗತ್ಯವಾದ ಅನೇಕ ಜೀವಸತ್ವಗಳನ್ನು ಹೊಂದಿರುತ್ತದೆ.
ಮೆದುಳಿಗೆ ಸಹಕಾರಿ: ಮೆದುಳಿನ ಆರೋಗ್ಯಕ್ಕೆ ಹೂಕೋಸು ತುಂಬಾ ಪ್ರಯೋಜನಕಾರಿ. ಮೆದುಳಿನ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ನೀಡುತ್ತದೆ. ಬುದ್ಧಿವಂತಿಕೆಯ ಬೆಳವಣಿಗೆಗೂ ಸಹಕಾರಿಯಾಗಿದೆ.
ಕ್ಯಾನ್ಸರ್ ತಡೆಯಲು ಸಹಾಯ: ಹೂಕೋಸುವಿನಲ್ಲಿ ಸಲ್ಫೋರಾಫೇನ್ ಸಮೃದ್ಧವಾಗಿರುವದರಿಂದ ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.