ಇಂಡಿಯನ್ ಪ್ರೀಮಿಯರ್ ಅಖಾಡದಲ್ಲಿ ಒಮ್ಮೆಯೂ ಟ್ರೋಫಿ ಗೆಲ್ಲದ ಮೂರು ತಂಡಗಳ ಪೈಕಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಇದೀಗ 18ನೇ ಆವೃತ್ತಿಯ ಟೂರ್ನಿಗೆ ತಯಾರಿ ನಡೆಸುತ್ತಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂದಿರುವ ನಿಯಮ ಬದಲಾವಣೆ ಪರಿಣಾಮ ಆರ್ಸಿಬಿ ತಂಡ ನಾಲ್ಕರ ಬದಲು 6 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ನಿಯಮ ಪ್ರಕಾರ ಆರ್ಸಿಬಿ ಉಳಿಸಿಕೊಳ್ಳುವ ಈ ಮೂರು ಆಟಗಾರರಿಗೆ ಮುಂದಿನ ಮೂರು ವರ್ಷಗಳ ಕಾಲ ತಂಡದಲ್ಲಿ ಉಳಿಯುವ ಅವಕಾಶ ಇಗಲಿದೆ. ಆ 6 ಆಟಗಾರರು ಯಾರೆಂಬ ವಿವರ ಇಲ್ಲಿ ನಿಡಲಾಗಿದೆ. ಅಂದಹಾಗೆ ಅಕ್ಟೋಬರ್ 31ರ ಒಳಗೆ ತಂಡಗಳು ಉಳಸಿಕೊಂಡ ಮತ್ತು ಬಿಡುಗಡೆ ಮಾಡುತ್ತಿರುವ ಆಟಗಾರರ ಪಟ್ಟಿ ಪ್ರಕಟಿಸಬೇಕಿದೆ.
ಮುಂಬೈ ಇಂಡಿಯನ್ಸ್ ತಂಡದಿಂದ ಆರ್ಸಿಬಿ ಬಳಗಕ್ಕೆ ಮಾರಾಟವಾದ ಆಸ್ಟ್ರೇಲಿಯಾ ಆಲ್ರೌಂಡರ್ ಕ್ಯಾಮೆರಾನ್ ಗ್ರೀನ್, ಐಪಿಎಲ್ 2024 ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು. ಆಡಿದ 13 ಪಂದ್ಯಗಳಲ್ಲಿ 255 ರನ್ಗಳನ್ನು ಬಾರಿಸಿದ ಗ್ರೀನ್ 143.26ರ ಸರಾಸರಿ ಸ್ಟ್ರೈಕ್ರೇಟ್ ಕೂಡ ಕಾಯ್ದುಕೊಂಡರು. ಜೊತೆಗೆ ಬೌಲಿಂಗ್ನಲ್ಲೂ 10 ವಿಕೆಟ್ಗಳನ್ನು ಪಡೆದರು. ಔಟ್ ಆಫ್ ಫಾರ್ಮ್ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಸಡ್ಡುಹೊಡೆದು ನಿರಂತರವಾಗಿ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡರು.
ಆರ್ಸಿಬಿ ತಂಡದಲ್ಲಿ ಅರಳಿದ ಪ್ರತಿಭೆ ಮೊಹಮ್ಮದ್ ಸಿರಾಜ್ ಈಗ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಮೊದಲ ಆಯ್ಕೆಯ ಫಾಸ್ಟ್ ಬೌಲರ್ಗಳ ಪೈಕಿ ಒಬ್ಬರಾಗಿದ್ದಾರೆ. ಅವರೊಟ್ಟಿಗೆ ಒಪ್ಪಂದ ವಿಸ್ತರಿಸಿ ಬಲಿಷ್ಠ ದೇಶಿ ಬೌಲಿಂಗ್ ವಿಭಾಗ ಹೊಂದುಲು ಆರ್ಸಿಬಿ ಎದುರು ನೋಡುತ್ತಿದೆ. ಸಿರಾಜ್ ಈವರೆಗೆ ಆಡಿರುವ 93 ಪಂದ್ಯಗಳಲ್ಲಿ ಅಷ್ಟೇ ವಿಕೆಟ್ಗಳನ್ನು ಪಡೆದಿದ್ದಾರೆ.
ದೇಶಿ ಟೂರ್ನಿಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಭಾರತದ ಟೆಸ್ಟ್ ಕ್ರಿಕೆಟ್ ತಂಡದಲ್ಲೂ ಸ್ಥಾನ ಗಿಟ್ಟಿಸಿರುವ ಯುವ ಫಾಸ್ಟ್ ಬೌಲರ್ ಆಕಾಶ್ ದೀಪ್ ಅವರ ಪ್ರಗತಿ ಅದ್ಭುತವಾಗಿದೆ. ತಂಡದಲ್ಲಿ ದೇಶಿ ವೇಗಿಗಳ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಆಕಾಶ್ ಜೊತೆಗೆ ಆರ್ಸಿಬಿ ತನ್ನ ಒಪ್ಪಂದ ವಿಸ್ತರಿಸಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ಆಯ್ಕೆಯ ಆಟಗಾರನನ್ನಾಗಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಉಳಿಸಿಕೊಳ್ಳಲಿದೆ. 2008ರಿಂದ ಈವರೆಗೆ ಎಲ್ಲ ಆವೃತ್ತಿಗಳಲ್ಲಿ ಆರ್ಸಿಬಿ ಪರ ಬ್ಯಾಟ್ ಬೀಸಿರುವ ವಿರಾಟ್ ಕೊಹ್ಲಿ, 38.76ರ ಸರಾಸರಿಯಲ್ಲಿ 8000ಕ್ಕೂ ಅಧಿಕ ರನ್ ಬಾರಿಸಿದ್ದಾರೆ.
ಐಪಿಎಲ್ 2024 ಟೂರ್ನಿಯಲ್ಲಿ ತಮ್ಮ ಶ್ರೇಷ್ಠ ಆಟ ಹೊರತಂದ ರಜತ್ ಪಾಟಿದಾರ್, ಆಡಿದ 15 ಪಂದ್ಯಗಳಲ್ಲಿ 395 ರನ್ಗಳನ್ನು ಬಾರಿಸಿದರು. 177.13ರ ಸ್ಟ್ರೈಕ್ರೇಟ್ ಕಾಯ್ದುಕೊಂಡ ರಜತ್ ಪಾಟಿದಾರ್, ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬಾಗಬಲ್ಲರು. 2022ರ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಜತ್ ಬಾರಿಸಿದ ಅಜೇಯ 112 ರನ್ಗಳನ್ನು ಯಾರೂ ಮರೆಯುವಂತ್ತಿಲ್ಲ.
ಯುವ ಎಡಗೈ ವೇಗದ ಬೌಲರ್ ಯಶಸ್ ದಯಾಳ್, ಐಪಿಎಲ್ 2024 ಟೂರ್ನಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 15 ವಿಕೆಟ್ಗಳನ್ನು ಪಡೆಯುವ ಮೂಲಕ ತಂಡದ ಯಶಸ್ಸಿಗೆ ಬಲವಾಗಿದ್ದರು. ಪ್ರತಿಭಾನ್ವಿತ ಯುವ ವೇಗಿಯ ಮೇಲೆ ಆರ್ಸಿಬಿ ಭರವಸೆ ಇಟ್ಟು ಮತ್ತೊಂದು ಅವಕಾಶ ಕೊಡುವ ಸಾಧ್ಯತೆ ಇದೆ.