ಭಾರತದ ದೇಶಿ ಕ್ರಿಕೆಟ್ನ ಅತ್ಯಂತ ಯಶಸ್ವಿ ತಂಡವಾದ ಮುಂಬೈ, 2024ರ ಇರಾನಿ ಕಪ್ ಪ್ರಶಸ್ತಿಯನ್ನು ಗೆದ್ದಿದೆ. ಈ ಪಂದ್ಯವನ್ನು ರಣಜಿ ಟ್ರೋಫಿ ಚಾಂಪಿಯನ್ ಮತ್ತು ರೆಸ್ಟ್ ಆಫ್ ತಂಡಗಳ ನಡುವೆ ನಡೆಸಲಾಗುತ್ತದೆ. ಪಂದ್ಯ ಡ್ರಾ ಆಗಿದ್ದು, ಪ್ರಥಮ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ಮುಂಬೈ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಮೊದಲ ಇನಿಂಗ್ಸ್ನಲ್ಲಿ ಸರ್ಫರಾಜ್ ಖಾನ್ ಅವರ ದ್ವಿಶತಕದ ನೆರವಿನಿಂದ ಮುಂಬೈ 537 ರನ್ ಗಳಿಸಿತ್ತು. ಅಭಿಮನ್ಯು ಈಶ್ವರನ್ ಅವರ ಇನಿಂಗ್ಸ್ (191 ರನ್) ಹೊರತಾಗಿಯೂ, ರೆಸ್ಟ್ ಆಫ್ ಇಂಡಿಯಾ ಕೇವಲ 416 ರನ್ ಗಳಿಸಲು ಸಾಧ್ಯವಾಯಿತು.
ಮುಂಬೈ ತಂಡ 15ನೇ ಬಾರಿಗೆ ಇರಾನಿ ಕಪ್ ಪ್ರಶಸ್ತಿ ಗೆದ್ದುಕೊಂಡಿದೆ. ಇರಾನಿ ಕಪ್ 1959-60ರಲ್ಲಿ ಪ್ರಾರಂಭವಾಗಿತ್ತು. ಇರಾನಿ ಕಪ್ನ ಮೊದಲ ಮೂರು ಸೀಸನ್ಗಳನ್ನು ಮುಂಬೈ ಗೆದ್ದಿತ್ತು. ನಾಲ್ಕನೇ ಋತುವನ್ನು ರೆಸ್ಟ್ ಆಫ್ ಇಂಡಿಯಾ ಗೆದ್ದಿತು. ಆಗ ಮುಂಬೈ ಅನ್ನು ಬಾಂಬೆ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿತ್ತು. ಇಲ್ಲಿಯವರೆಗೆ ರೆಸ್ಟ್ ಆಫ್ ಇಂಡಿಯಾ ಗರಿಷ್ಠ 30 ಬಾರಿ ಪ್ರಶಸ್ತಿ ಗೆದ್ದಿದೆ. ಮುಂಬೈ 30 ಬಾರಿ ಇದರಲ್ಲಿ ಭಾಗವಹಿಸಿದೆ. ಕರ್ನಾಟಕ ತಂಡ 6 ಬಾರಿ ಚಾಂಪಿಯನ್ ಆಗಿದೆ.
ಪಂದ್ಯದ ಕೊನೆಯ ದಿನವಾದ ಶನಿವಾರ ಮುಂಬೈ ಆರು ವಿಕೆಟ್ಗೆ 153 ರನ್ಗಳ ಮುನ್ನಡೆಯೊಂದಿಗೆ ಆಟವನ್ನು ಆರಂಭಿಸಿತ್ತು. ಅಜಿಂಕ್ಯ ರಹಾನೆ ಪಡೆಯು ತನ್ನ ಎರಡನೇ ಇನಿಂಗ್ಸ್ನಲ್ಲಿ ಎಂಟು ವಿಕೆಟ್ಗೆ 329 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಆ ಮೂಲಕ ಒಟ್ಟು ಮುನ್ನಡೆ 450 ರನ್ ಆಯಿತು. ತನುಷ್ ಕೋಟಿಯನ್ 150 ಎಸೆತಗಳಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 114 ರನ್ ಗಳಿಸಿ ಅಜೇಯರಾಗಿ ಉಳಿದರು. ಏಕೈಕ ಸೆಷನ್ನ ಕಡಿಮೆ ಅವಧಿಯಲ್ಲಿ 451 ರನ್ಗಳ ಗುರಿಯನ್ನು ತಲುಪುವುದು ಅಸಾಧ್ಯ ಎಂದು ತಿಳಿದ ನಾಯಕ ಋತುರಾಜ್ ಗಾಯಕ್ವಾಡ್ ಅವರು ಡ್ರಾಗೆ ಮುಂದಾದರು. ಅದರಂತೆ ರಣಜಿ ಟ್ರೋಫಿ ಚಾಂಪಿಯನ್ ಮುಂಬೈ ಇರಾನಿ ಕಪ್ ಚಾಂಪಿಯನ್ ಆಯಿತು.