ಶಾರದೀಯ ನವರಾತ್ರಿಯ 5 ನೇ ದಿನದಂದು ಭಕ್ತರು ಸ್ಕಂದಮಾತಾ ದೇವಿಗೆ ಪ್ರಾರ್ಥಿಸುತ್ತಾರೆ. ಅವಳು ದುರ್ಗಾ ಮಾತೆಯ ಐದನೇ ಅವತಾರ ಮತ್ತು ಸಹಾನುಭೂತಿ, ಮಾತೃತ್ವ ಮತ್ತು ಪ್ರೀತಿಯಿಂದ ತುಂಬಿದ ಹೃದಯವನ್ನು ಪ್ರತಿನಿಧಿಸುತ್ತಾಳೆ.
DCM ಎಚ್ಚರಿಕೆಗೂ ಬಗ್ಗದ ಅಧಿಕಾರಿಗಳು: ಈ ರಸ್ತೆಯಲ್ಲಿ ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುತ್ತಿರುವ ಸವಾರರು!
ಪೌರಾಣಿಕ ನಂಬಿಕೆಗಳ ಪ್ರಕಾರ, ಸ್ಕಂದಮಾತಾ ತಾಯಿ ಪಾರ್ವತಿಯ ಒಂದು ರೂಪವಾಗಿದೆ. ಈಕೆಯನ್ನು ನವರಾತ್ರಿ ಹಬ್ಬದ 5ನೇ ದಿನದಂದು ಪೂಜಿಸಲಾಗುತ್ತದೆ. ಒಮ್ಮೆ ತಾಯಿ ಪಾರ್ವತಿಯು ಕೋಪಗೊಂಡು ಕುಮಾರ ಕಾರ್ತಿಕೇಯನನ್ನು ರಕ್ಷಿಸಲು ಆದಿಶಕ್ತಿಯ ರೂಪದಲ್ಲಿ ಕಾಣಿಸಿಕೊಂಡಾಗ ಇಂದ್ರನು ಭಯದಿಂದ ನಡುಗಲು ಪ್ರಾರಂಭಿಸಿದನು. ಇಂದ್ರನು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ದೇವಿಯ ಬಳಿ ಕ್ಷಮೆಯನ್ನು ಕೇಳಿದನು. ಕುಮಾರ ಕಾರ್ತಿಕೇಯನ ಒಂದು ಹೆಸರು ಕೂಡ ಸ್ಕಂದ ಆಗಿರುವುದರಿಂದ, ಎಲ್ಲಾ ದೇವತೆಗಳು ದುರ್ಗಾ ದೇವಿಯ ಈ ರೂಪವನ್ನು ಪೂಜಿಸಲು ಮತ್ತು ಆಕೆಗೆ ಗೌರವವನ್ನು ನೀಡಲು ಆಕೆಯನ್ನು ಸ್ಕಂದಮಾತೆ ಎಂದು ಕರೆಯಲು ಪ್ರಾರಂಭಿಸಿದರು ಮತ್ತು ಅವಳನ್ನು ಸ್ತುತಿಸಲು ಪ್ರಾರಂಭಿಸಿದರು. ಅಂದಿನಿಂದ, ನವರಾತ್ರಿ ಹಬ್ಬದ 5ನೇ ದಿನದಂದು ದುರ್ಗಾ ದೇವಿಯ ಸ್ಕಂದಮಾತೆ ರೂಪವನ್ನು ಪೂಜಿಸಲಾಗುತ್ತದೆ.
ಈ ಹಿಂದಿನ ಮೂರು ದಿನಗಳಲ್ಲಿ ಪಾರ್ವತೀ ದೇವಿಯ ಮೂರು ಅವತಾರಗಳನ್ನು ನೋಡಿದೆವು- ಹಿಮವಂತನ ಮಗಳಾದ ಶೈಲಪುತ್ರೀ, ನಂತರ ಶಿವನನ್ನು ಆರಾಧಿಸಿ ಪೂಜಿಸಿ ಮೆಚ್ಚಿಸುವ ಬ್ರಹ್ಮಚಾರಿಣೀ, ನಂತರ ಭಯಂಕರ ಸ್ವರೂಪದ ಶಿವನನ್ನು ಮದುವೆಯ ಮಂಟಪದಲ್ಲಿ ಅದೇ ಸ್ವರೂಪ ತಾಳಿ ಒಲಿಸಿಕೊಳ್ಳುವ ಚಂದ್ರಘಂಟಾ, ನಂತರ ರಾಕ್ಷಸರನ್ನು ನಾಶ ಮಾಡುವ ಸ್ವರೂಪದ ಕೂಷ್ಮಾಂಡಾ ದೇವಿ. ಐದನೇ ದಿನದಂದು ದೇವಿಯು ಸ್ಕಂದಮಾತೆಯಾಗಿ ಕಾಣಿಸಿಕೊಳ್ಳುತ್ತಾಳೆ.
ನವರಾತ್ರಿಯ ಐದನೇ ದಿನ ಪಂಚಮಿ ತಿಥಿಯಂದು ದುರ್ಗಾಮಾತೆಯ ಅವತಾರವಾದ ಸ್ಕಂದ ಮಾತೆಯನ್ನು ಆರಾಧಿಸಲಾಗುತ್ತದೆ. ಭಗವಾನ್ ಸ್ಕಂದನ ಮಾತೆಯಾಗಿ ದುರ್ಗೆಯು ಅವತರಿಸಿದ್ದರಿಂದ ‘ಸ್ಕಂದಮಾತಾ’ ಎಂದು ಪ್ರಸಿದ್ಧಳಾಗಿದ್ದಾಳೆ. ದೇವಿಯ ಈ ರೂಪವನ್ನು ಆರಾಧಿಸಿದರೆ ನಮ್ಮಲ್ಲಿರುವ ದೈವತ್ವವನ್ನು ಪೋಷಿಸುತ್ತಾಳೆ ಎಂಬ ನಂಬಿಕೆ ಇದೆ.
ಮಗನಾದ ಸ್ಕಂದನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡಿರುವ ದುರ್ಗಾದೇವಿಯ ಈ ಅವತಾರ ಅತ್ಯಂತ ಪವಿತ್ರ ಹಾಗೂ ಅದ್ಭುತ ರೂಪ ಎಂದು ಹೇಳಲಾಗುತ್ತದೆ. ಈ ರೂಪದಲ್ಲಿ ತಾಯಿಯು ಸಂತೋಷದಿಂದ ಹಾಗೂ ಹಿತಕರವಾದ ಭಾವನೆಯೊಂದಿಗೆ ಕಾಣಿಸಿಕೊಳ್ಳುತ್ತಾಳೆ. ದೇವಿಯನ್ನು ಆರಾಧಿಸುವ ಭಕ್ತರು ಮಾತೆಯ ಆಶೀರ್ವಾದ ಮಾತ್ರವಲ್ಲದೇ ಮಗನಾದ ಸ್ಕಂದನ ಆಶೀರ್ವಾದವನ್ನೂ ಪಡೆಯಬಹುದು. ಈ ಅವತಾರವನ್ನು ಪೂಜಿಸುವುದರಿಂದ ಭಕ್ತರು ಎಲ್ಲಾ ಕಷ್ಟಗಳಿಂದ ಮುಕ್ತರಾಗಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ
ಸ್ಕಂದ ಮಾತೆಯು ಬುಧಗ್ರಹದ ಮೇಲೆ ಅಧಿಪತ್ಯವನ್ನು ಹೊಂದಿರುತ್ತಾಳೆ. ಶುದ್ಧಮನಸ್ಸಿನಿಂದ, ಭಕ್ತಿಯಿಂದ ಯಾರು ಆರಾಧನೆ ಮಾಡುತ್ತರೋ ಅವರಿಗೆ ದೇವಿಯು ಹೆಸರು, ಸಂಪತ್ತು ಹಾಗೂ ಸಮೃದ್ಧಿಯನ್ನು ನೀಡುತ್ತಾಳೆ. ಜನ್ಮ ಕುಂಡಲಿಯಲ್ಲಿ ಬುಧನು ಪ್ರತಿಕೂಲ ಸ್ಥಾನದಲ್ಲಿದ್ದರೆ ಉಂಟಾಗುವ ತೊಂದರೆಯನ್ನು ದೇವಿಯು ನಿವಾರಿಸುತ್ತಾಳೆ.
ಸ್ಕಂದ ಮಾತೆಗೆ ನಾಲ್ಕು ಭುಜಗಳಿದ್ದು ಒಂದು ಕೈಯಲ್ಲಿ ಸ್ಕಂದನನ್ನು ಹಾಗೂ ಎರಡು ಕೈಯಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು, ಸದಾ ತನ್ನ ಭಕ್ತರನ್ನು ಆಶೀರ್ವಾದ ಮಾಡುತ್ತಾಳೆ. ಇವಳ ಶರೀರದ ಬಣ್ಣವೂ ಸಂಪೂರ್ಣವಾಗಿ ಬೆಳ್ಳಗಿದ್ದು, ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ. ಈ ಕಾರಣಕ್ಕಾಗಿ ಇವಳನ್ನು ಪದ್ಮಾಸನಾ ದೇವಿ ಎಂದು ಕರೆಯುತ್ತಾರೆ. ಸಿಂಹವು ಸ್ಕಂದಮಾತೆಯ ವಾಹನವಾಗಿದೆ.
ಪೂಜಾ ವಿಧಿ
ಸ್ಕಂದ ಮಾತೆಗೆ ಕೆಂಪು ಬಣ್ಣದ ಹೂವು ವಿಶೇಷವಾಗಿ ಗುಲಾಬಿ ಹೂವು ಪ್ರಿಯವಾದುದು. ಸ್ಕಂದ ಮಾತೆ ಹಾಗೂ ಮಾತೆಯ ಪುತ್ರ ಸ್ಕಂದ ಆಶೀರ್ವಾದಕ್ಕೆ ವಿಶೇಷ ಪೂಜೆಯನ್ನು ಈ ದಿನ ಮಾಡಬೇಕು. ಷೋಡಶೋಪಚಾರ ಪೂಜೆಯ ನಂತರ ಆರತಿಯೊಂದಿಗೆ ಪೂಜೆಯನ್ನು ಮುಕ್ತಾಯಗೊಳಿಸಬೇಕು. ಜೀವನದ ಸದ್ಗತಿಗೆ ಹಾಗೂ ಆಧ್ಯಾತ್ಮಿಕ ಸಂತುಷ್ಟಿಗಾಗಿ ಈ ಅವತಾರಕ್ಕೆ ಆರಾಧನೆ ಮಾಡಲಾಗುವುದು.
ಶಾರದೀಯ ನವರಾತ್ರಿಯ ಐದನೇ ದಿನವು ತಾಯಿಯ ಶಕ್ತಿ ಮತ್ತು ಪ್ರೀತಿಗೆ ಗೌರವವನ್ನು ಸಲ್ಲಿಸಲು ಸ್ಕಂದಾಮಾತಾ ದೇವಿಯ ಆರಾಧನೆಯನ್ನು ನಡೆಸಲಾಗುತ್ತದೆ. ಸಂತೋಷದ ಕುಟುಂಬ ಜೀವನ, ಜ್ಞಾನ, ಯಶಸ್ಸು ಮತ್ತು ಆಧ್ಯಾತ್ಮಿಕ ಬೆಳವಣಿಗೆಗಾಗಿ ಭಕ್ತರು ಈ ದಿನ ಸ್ಕಂದಮಾತಾ ದೇವಿಯನ್ನು ಪೂಜಿಸುತ್ತಾರೆ. ಸ್ಕಂದಮಾತಾ ದೇವಿಯನ್ನು ಪೂಜಿಸುವ ಮೂಲಕ, ನಾವು ನಮ್ಮ ಸ್ವಂತ ತಾಯಿಗೆ ಗೌರವವನ್ನು ನೀಡಲು ಮತ್ತು ಅವರ ಕುಟುಂಬಗಳಲ್ಲಿ ಯೋಗಕ್ಷೇಮದ ಭಾವವನ್ನು ಬೆಳೆಸಲು ದೈವಿಕ ತಾಯಿಯ ಅನುಗ್ರಹವನ್ನು ಬೇಡಿಕೊಳ್ಳುತ್ತಾರೆ.