ದೆಹಲಿ: 5,000 ಕೋಟಿ ರೂ.ಗಳ ಡ್ರಗ್ಸ್ (Drugs) ದಂಧೆಯ ಬೆನ್ನು ಬಿದ್ದು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ (Delhi Police) ತಂಡಕ್ಕೆ ಲಂಡನ್ ಮತ್ತು ದುಬೈ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಜಾಲದ ಮಾಹಿತಿ ಲಭ್ಯವಾಗಿದೆ. ದಂಧೆಯ ಹಿಂದಿರುವ ಆರೋಪಿ ತುಷಾರ್ ಗೋಯಲ್ ಸೇರಿದಂತೆ ಇತರೆ ಆರೋಪಿಗಳ ಪ್ರಾಥಮಿಕ ವಿಚಾರಣೆಯ ಬಳಿಕ ಈ ಮಾಹಿತಿ ಸ್ಪಷ್ಟವಾಗಿದೆ.
ಪ್ರಕರಣದಲ್ಲಿ ದಕ್ಷಿಣ ದೆಹಲಿಯ ಸರೋಜಿನಿ ನಗರದ ನಿವಾಸಿ ವೀರೇಂದ್ರ ಬಸೋಯಾ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಬಸೋಯಾ ದುಬೈನಿಂದ ಬೃಹತ್ ಡ್ರಗ್ ಸಿಂಡಿಕೇಟ್ ನಡೆಸುತ್ತಿದ್ದಾನೆ ಎನ್ನಲಾಗಿದೆ. ಕಳೆದ ವರ್ಷ ಪುಣೆ ಪೊಲೀಸರು 3,000 ಕೋಟಿ ರೂಪಾಯಿ ಮೌಲ್ಯದ ‘ಮಿಯಾಂವ್ ಮಿಯಾಂವ್’ ಡ್ರಗ್ಸ್ ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲೂ ಬಸೋಯಾ ಹೆಸರು ಕೇಳಿಬಂದಿತ್ತು.
ಪುಣೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಂಧನದಿಂದ ಪಾರಾಗಲು ಬಸೋಯಾ ದೆಹಲಿಯಿಂದ ದುಬೈಗೆ ಪರಾರಿಯಾಗಿದ್ದ. ದೆಹಲಿ ಪ್ರಕರಣದ ಆರೋಪಿ ತುಷಾರ್ ಗೋಯಲ್ ಜೊತೆ ಬಸೋಯಾ ಅವರ ನಿಕಟ ಸಂಬಂಧ ಹೊಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಬಸೋಯಾ ಅವರು ತಮ್ಮ ಡೀಲ್ಗಳಲ್ಲಿ ಪ್ರತಿ ವಿತರಣೆಗೆ 4 ಕೋಟಿ ರೂ.ಗಳನ್ನು ಗೋಯಲ್ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ದೆಹಲಿ ಪೊಲೀಸ್ ವಿಶೇಷ ಕೋಶವು ಮುಂಬೈ, ಪುಣೆ ಮತ್ತು ಇತರ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡ್ರಗ್ ಮಾಫಿಯಾಗಳನ್ನು ಈ ಪ್ರಕಣದ ವ್ಯಾಪ್ತಿಗೆ ಸೇರಿಸಲು ತನ್ನ ತನಿಖೆಯನ್ನು ವಿಸ್ತರಿಸಿದೆ. ಎಲ್ಲರೂ ಸಾಮಾನ್ಯವಾಗಿ ಒಂದೇ ಸಿಂಡಿಕೇಟ್ಗೆ ಸಂಪರ್ಕ ಹೊಂದಿದ್ದಾರೆಂದು ಶಂಕಿಸಲಾಗಿದೆ. ದಕ್ಷಿಣ ದೆಹಲಿಯಲ್ಲಿ ನಡೆಸಿದ ದಾಳಿಯಲ್ಲಿ 5,600 ಕೋಟಿ ರೂಪಾಯಿ ಮೌಲ್ಯದ 500 ಕೆಜಿ ಕೊಕೇನ್ ಮತ್ತು 40 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡ ನಂತರ ತುಷಾರ್ ಗೋಯಲ್ ಅವರನ್ನು ಅ.2 ರಂದು ಬಂಧಿಸಲಾಯಿತು.