ರಾಯ್ಪುರ: ಛತ್ತೀಸ್ಗಢದ (Chhattisgarh) ನಕ್ಸಲ್ ಪೀಡಿತ ಪ್ರದೇಶಗಳಾದ ನಾರಾಯಣಪುರ (Narayanpur) ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿ ಭದ್ರತಾ ಪಡೆಗಳು ಎನ್ಕೌಂಟರ್ (Encounter) ನಡೆಸಿದ್ದು, 35 ನಕ್ಸಲರು (Naxalites) ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಿಂದ ಅಪಾರ ಪ್ರಮಾಣದ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ.
ದಾಂತೇವಾಡದ ಬರ್ಸೂರಿನ ತುಳತುಳಿ ಗ್ರಾಮ ಮತ್ತು ನಾರಾಯಣಪುರದ ಓರ್ಚಾದ ನೆಂದೂರು ಗ್ರಾಮದ ಅರಣ್ಯದಲ್ಲಿ ನಕ್ಸಲರು ಇರುವ ಖಚಿತ ಮಾಹಿತಿ ಮೇರೆಗೆ ಭದ್ರತಾಪಡೆಗಳು ಶೋಧ ಕಾರ್ಯ ಆರಂಭಿಸಿದವು ಈ ವೇಳೆ ನಕ್ಸಲರು ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದೆ.
ನಾರಾಯಣಪುರ-ದಾಂತೇವಾಡ ಗಡಿ ಪ್ರದೇಶದಲ್ಲಿ ಬಸ್ತಾರ್ ಪ್ರದೇಶದ ಉನ್ನತ ನಕ್ಸಲೀಯರ ಸಭೆಯ ಬಗ್ಗೆ ಮಾಹಿತಿ ಲಭಿಸಿತು. ಈ ಹಿನ್ನೆಲೆ ಹುಡುಕಾಟ ಮತ್ತು ರಕ್ಷಣಾ ತಂಡಗಳನ್ನು ಕಳುಹಿಸಲಾಯಿತು. ಶುಕ್ರವಾರ ಮಧ್ಯಾಹ್ನದಿಂದ ಎನ್ಕೌಂಟರ್ ಆರಂಭವಾಗಿ ತಡರಾತ್ರಿಯವರೆಗೂ ಮುಂದುವರೆಯಿತು. ಶನಿವಾರ ಬೆಳಗ್ಗೆಯೂ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಇಲ್ಲಿಯವರೆಗೆ ಒಟ್ಟು 35 ನಕ್ಸಲರ ಮೃತದೇಹಗಳು ಪತ್ತೆಯಾಗಿವೆ ಎಂದು ನಾರಾಯಣಪುರ ಎಸ್ಪಿ ಪ್ರಭಾತ್ ಕುಮಾರ್ ತಿಳಿಸಿದ್ದಾರೆ.
ಎನ್ಕೌಂಟರ್ನಲ್ಲಿ ಎಲ್ಲಾ ಯೋಧರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ನಕ್ಸಲರಿಂದ ಎಲ್ಎಂಜಿ ರೈಫಲ್, ಎಕೆ 47 ರೈಫಲ್, ಎಸ್ಎಲ್ಆರ್ ರೈಫಲ್, ಐಎನ್ಎಸ್ ಎಎಸ್ ರೈಫಲ್, 303 ರೈಫಲ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆ ಬೆನ್ನಲ್ಲೇ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ತಮ್ಮ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಇದರಲ್ಲಿ ನಾರಾಯಣಪುರ-ದಾಂತೇವಾಡ ಜಿಲ್ಲೆಯ ತುಳತುಳಿ ಅರಣ್ಯದಲ್ಲಿ ನಡೆಯುತ್ತಿರುವ ಎನ್ಕೌಂಟರ್ ಕುರಿತು ಚರ್ಚೆ ನಡೆಸಿದ್ದಾರೆ. ನಕ್ಸಲ್ ಎನ್ಕೌಂಟರ್ ಕುರಿತು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಮೂಲಗಳು ಹೇಳಿವೆ.