ರನ್ ಮಷಿನ್ ವಿರಾಟ್ ಕೊಹ್ಲಿಯ ವಿಶ್ವ ದಾಖಲೆ ಮುರಿಯಲು ಸೂರ್ಯ ಕುಮಾರ್ ಯಾದವ್ ಸಜ್ಜಾಗಿದ್ದಾರೆ.
ಅಂದರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ವಿಶ್ವ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ 2010 ರಿಂದ 2024 ರವರೆಗೆ ಟೀಮ್ ಇಂಡಿಯಾ ಪರ 125 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 16 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಈ ದಾಖಲೆಯನ್ನು ಸರಿಗಟ್ಟಿರುವ ಸೂರ್ಯಕುಮಾರ್ ಯಾದವ್ ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಒಂದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಟೀಮ್ ಇಂಡಿಯಾ ಪರ ಈವರೆಗೆ 71 ಟಿ20 ಪಂದ್ಯಗಳನ್ನಾಡಿರುವ ಸೂರ್ಯ 16 ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾಗಿದ್ದಾರೆ
ಹೀಗಾಗಿ ಬಾಂಗ್ಲಾದೇಶ್ ವಿರುದ್ಧ ಮೂರು ಪಂದ್ಯಗಳ ಸರಣಿಯಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ವಿಶ್ವ ದಾಖಲೆ ಸೂರ್ಯಕುಮಾರ್ ಯಾದವ್ ಪಾಲಾಗಲಿದೆ. ಅಲ್ಲದೆ 75 ಕ್ಕಿಂತ ಕಡಿಮೆ ಪಂದ್ಯಗಳಲ್ಲಿ 16 ಕ್ಕಿಂತ ಅಧಿಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ವಿಶ್ವದ ಏಕೈಕ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಅತ್ತ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ ಕಾರಣ ಈ ದಾಖಲೆ ಮುಂದುವರೆಯುವುದಿಲ್ಲ. ಹೀಗಾಗಿ ಬಾಂಗ್ಲಾದೇಶ್ ವಿರುದ್ಧದ ಸರಣಿಯ ಬಳಿಕವೂ ಕೂಡ ಸೂರ್ಯಕುಮಾರ್ ಯಾದವ್ಗೆ ಈ ವಿಶ್ವ ದಾಖಲೆಯನ್ನು ಮುರಿಯಲು ಉತ್ತಮ ಅವಕಾಶವಿದೆ. ಹಾಗಾಗಿ ಕಿಂಗ್ ಕೊಹ್ಲಿ ಹೆಸರಿನಲ್ಲಿರುವ ಈ ವರ್ಲ್ಡ್ ರೆಕಾರ್ಡ್ ಮುಂದೊಂದು ದಿನ ಸೂರ್ಯನ ಪಾಲಾಗುವುದರಲ್ಲಿ ಅನುಮಾನವೇ ಇಲ್ಲ.