ನ್ಯೂಜಿಲೆಂಡ್ ತಂಡವು ನಮಗಿಂತ ಉತ್ತಮ ಕ್ರಿಕೆಟ್ ಆಡಿದೆ ಆದ್ದರಿಂದ ನಾವು ಸೋಲು ಕಂಡಿದ್ದೇವೆ ಎಂದು ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ಹತಾಶೆ ವ್ಯಕ್ತಪಡಿಸಿದ್ದಾರೆ. ,2024ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಭಾರತ ತಂಡವು 58 ರನ್ಗಳ ಸೋಲು ಕಂಡಿದೆ.
Womens T20 World Cup: ಆರಂಭಿಕ ಪಂದ್ಯದಲ್ಲೇ ನ್ಯೂಜಿಲೆಂಡ್ ಟೀಂ ವಿರುದ್ಧ ಭಾರತಕ್ಕೆ ಸೋಲು!
ಪಂದ್ಯದಲ್ಲಿ ನಮಗೆ ಗೆಲ್ಲುವ ಅನೇಕ ಅವಕಾಶಗಳು ಸಿಕ್ಕಿದ್ದೆವು. ಆದರೆ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ನಾವು ಸಂಪೂರ್ಣವಾಗಿ ಎಡವಿದ್ದೇವೆ. ಮುಖ್ಯವಾಗಿ ಮುಂದಿನ ಪಂದ್ಯಗಳಲ್ಲಿ ಕ್ಷೇತ್ರ ರಕ್ಷಣೆಯನ್ನು ಉತ್ತಮಪಡಿಸಿಕೊಳ್ಳಬೇಕು. ಅಲ್ಲದೆ ಈ ಸೋಲು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹರ್ಮನ್ಪ್ರೀತ್ ಕೌರ್ ತಿಳಿಸಿದ್ದಾರೆ.
ಪಂದ್ಯ ಮುಗಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರ್ಮನ್ಪ್ರೀತ್ ಕೌರ್, “ನಾವು ನಮ್ಮ ಉತ್ತಮ ಪ್ರದರ್ಶನ ತೋರುವಲ್ಲಿ ಎಡವಿದ್ದೇವೆ. ಆದರೆ ಇದನ್ನು ಮರೆತು ಮುಂದೆ ಸಾಗುತ್ತೇವೆ. ಎಲ್ಲ ಪಂದ್ಯಗಳು ನಿರ್ಣಾಯಕ ಎಂಬುದು ನಮಗೆ ತಿಳಿದಿದೆ. ನಾವು ಪಂದ್ಯ ಗೆಲ್ಲುವ ಅವಕಾಶ ಸೃಷ್ಟಿಸಿದ್ದೆವು ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಎಡವಿದೆವು. ಅವರು ನಮಗಿಂತ ಉತ್ತಮ ಪ್ರದರ್ಶನ ತೋರಿದ್ದಾರೆ, ಇದರಲ್ಲಿ ಅನುಮಾನವೇ ಬೇಡ,” ಎಂದು ಹರ್ಮನ್ಪ್ರೀತ್ ಕೌರ್ ಹೇಳಿದ್ದಾರೆ.
“ನಾವು ಹಲವು ಬಾರಿ 160-170 ರನ್ ಸವಾಲನ್ನು ಮೆಟ್ಟಿನಿಂತಿದ್ದೇವೆ. ಅಲ್ಲದೆ ನಮಗೆ ಈ ಪಂದ್ಯ ಗೆಲ್ಲುವ ಭರವಸೆ ಇತ್ತು. ನಾವು ಬ್ಯಾಟ್ ಮಾಡುವಾಗ ಯಾರಾದರೂ ಕೊನೆಯವರೆಗೂ ಪಂದ್ಯವನ್ನು ತೆಗೆದುಕೊಂಡು ಹೋಗಬೇಕಿತ್ತು. ಆದರೆ ನಾವು ಆರಂಭದಲ್ಲೇ ವಿಕೆಟ್ಗಳನ್ನು ಕಳೆದುಕೊಳ್ಳುತ್ತಾ ಸಾಗಿದೆವು,” ಎಂದು ಕೌರ್ ತಿಳಿಸಿದ್ದಾರೆ.