ಶಾರದೀಯ ನವರಾತ್ರಿಯ ಐದನೇ ದಿನದಂದು ದುರ್ಗಾ ದೇವಿಯ 5ನೇ ಅವತಾರವಾದ ಸ್ಕಂದಮಾತಾ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ದೇವಿಯ ಈ ರೂಪವನ್ನು ಪೂಜಿಸುವುದರಿಂದ ವ್ಯಕ್ತಿಯ ಶುಭ ಹಾರೈಕೆಗಳು ನೆರವೇರುತ್ತವೆ ಮತ್ತು ಮೋಕ್ಷದ ಮಾರ್ಗವೂ ಪ್ರಾಪ್ತಿಯಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ. ದುರ್ಗಾ ದೇವಿಯ ಈ ರೂಪ ಕಾರ್ತಿಕೇಯನ ತಾಯಿಯಾದ ಕಾರಣ ದೇವಿಯ ಈ ರೂಪಕ್ಕೆ ಸ್ಕಂದಮಾತೆ ಎಂಬ ಹೆಸರು ಬಂದಿದೆ. ಕಾಶಿ ಖಂಡ, ದೇವಿ ಪುರಾಣ ಮತ್ತು ಸ್ಕಂದ ಪುರಾಣಗಳಲ್ಲಿ ಈಕೆಯ ಬಗ್ಗೆ ವಿವರವಾಗಿ ಉಲ್ಲೇಖಿಸಲಾಗಿದೆ.
ತಾಯಿ ಸ್ಕಂದಮಾತಾಳು ಸ್ಕಂದ ಕುಮಾರನಾದ ಭಗವಾನ್ ಕಾರ್ತಿಕೇಯನ ತಾಯಿ. ತಾಯಿಯ ರೂಪದ ಬಗ್ಗೆ ವರ್ಣಿಸುವುದಾದರೆ, ಸ್ಕಂದ ದೇವನು ಸ್ಕಂದಮಾತೆಯ ಮಡಿಲಲ್ಲಿ ಕುಳಿತಿದ್ದಾನೆ. ತಾಯಿ ಸ್ಕಂದಮಾತೆ ಕಮಲದ ಆಸನದ ಮೇಲೆ ಕುಳಿತಿದ್ದಾಳೆ, ಆದ್ದರಿಂದ ಅವಳನ್ನು ಪದ್ಮಾಸನ ದೇವಿ ಎಂದೂ ಕರೆಯುತ್ತಾರೆ. ತಾಯಿ ಸ್ಕಂದಮಾತೆಯನ್ನು ಗೌರಿ, ಮಹೇಶ್ವರಿ, ಪಾರ್ವತಿ ಮತ್ತು ಉಮಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ತಾಯಿಯ ವಾಹನ ಸಿಂಹ. ತಾಯಿಯನ್ನು ಪೂಜಿಸುವುದರಿಂದ ಸಂತಾನ ಭಾಗ್ಯ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ.
ಬ್ರಹ್ಮ ಮುಹೂರ್ತ- ಮುಂಜಾನೆ 04:43 ರಿಂದ ಮುಂಜಾನೆ 05:34
ಬೆಳಿಗ್ಗೆ ಮುಹೂರ್ತ- ಮುಂಜಾನೆ 05:08 ರಿಂದ ಬೆಳಗ್ಗೆ 06:24
ಅಭಿಜಿತ್ ಮುಹೂರ್ತ- ಬೆಳಗ್ಗೆ11:43 ರಿಂದ ಮಧ್ಯಾಹ್ನ12:29
ವಿಜಯ ಮುಹೂರ್ತ- ಮಧ್ಯಾಹ್ನ 02:00 ರಿಂದ ಮಧ್ಯಾಹ್ನ 02:45
ಸಂಧ್ಯಾ ಮುಹೂರ್ತ- ಸಂಜೆ 05:48 ರಿಂದ 06:13
ಸಂಜೆ ಮುಹೂರ್ತ- ಸಂಜೆ 05:48 ರಿಂದ ಸಂಜೆ 07:04
ಅಮೃತ ಕಾಲ- ಮಧ್ಯಾಹ್ನ12:14 ರಿಂದ ಮಧ್ಯಾಹ್ನ 01:51
– ಮುಂಜಾನೆ ಬೇಗ ಎದ್ದು ಸ್ನಾನ ಇತ್ಯಾದಿಗಳನ್ನು ಮಾಡಿದ ನಂತರ ಶುಭ್ರವಾದ ಬಟ್ಟೆಯನ್ನು ಧರಿಸಿ.
– ಗಂಗಾಜಲದಿಂದ ದೇವಿಯ ವಿಗ್ರಹಕ್ಕೆ ಅಭಿಷೇಕ ಮಾಡಿ.
– ಅಭಿಷೇಕದ ನಂತರ ಹೂವುಗಳನ್ನು ಅರ್ಪಿಸಿ.
– ಹಾಗೆಯೇ ತಾಯಿಗೆ ಕುಂಕುಮವನ್ನು ಹಚ್ಚಿ.
– ತಾಯಿಗೆ ಸಿಹಿ ಖಾದ್ಯವನ್ನು ಮತ್ತು ಐದು ಬಗೆಯ ಹಣ್ಣುಗಳನ್ನು ಅರ್ಪಿಸಿ.
– ಸಾಧ್ಯವಾದಷ್ಟು ತಾಯಿ ಸ್ಕಂದಮಾತೆಯನ್ನು ಧ್ಯಾನಿಸಿ.
– ತಾಯಿಗೆ ಮರೆಯದೆ ಆರತಿಯನ್ನು ಮಾಡಿ.
ದುರ್ಗಾ ದೇವಿಯ ಸ್ಕಂದಮಾತೆ ರೂಪದ ಆರಾಧನೆಯಿಂದ ಒಬ್ಬನು ಅಂತಿಮ ಶಾಂತಿ ಮತ್ತು ಸಂತೋಷವನ್ನು ಅನುಭವಿಸುತ್ತಾನೆ. ತಾಯಿ ಸ್ಕಂದಮಾತೆಗೆ ಬಿಳಿ ಬಣ್ಣ ಅತ್ಯಂತ ಪ್ರಿಯವಾದ ಬಣ್ಣವಾಗಿದೆ. ನೀವು ಸ್ಕಂದ ಮಾತೆಯನ್ನು ಮೆಚ್ಚಿಸಲು ಬಯಸಿದರೆ, ಆಕೆಯನ್ನು ಪೂಜಿಸುವ ಸಮಯದಲ್ಲಿ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಈ ದಿನ ನೀವು ಸ್ಕಂದಮಾತೆಗೆ ಬಾಳೆಹಣ್ಣುಗಳನ್ನು ಅರ್ಪಿಸಬೇಕು. ಹಾಗೂ ಖೀರ್ನ್ನು ನೈವೇದ್ಯವಾಗಿ ನೀಡಬೇಕು.