ಮುಂಬೈ: ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗೆ ದಿನಾಂಕ ನಿಗದಿಯಾಗುವುದಕ್ಕೂ ಮುನ್ನವೇ ತೀವ್ರ ಕುತೂಹಲ ಕೆರಳಿಸಿದೆ. ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಬಗ್ಗೆ 10 ಫ್ರಾಂಚೈಸಿಗಳು ಅಕ್ಟೋಬರ್ 31ರ ಒಳಗೆ ಪಟ್ಟಿ ಬಿಡುಗಡೆ ಮಾಡುವಂತೆ ಬಿಸಿಸಿಐ (BCCI) ಡೆಡ್ಲೈನ್ ಫಿಕ್ಸ್ ಮಾಡಿದೆ.
2025ರ ಐಪಿಎಲ್ ಆವೃತ್ತಿ ದಿಗ್ಗಜ ಆಟಗಾರರ ಪಾಲಿಗೆ ಸವಾಲಿದ್ದಾಗಿದೆ. ಈ ಬಾರಿ ಐಪಿಎಲ್ನಲ್ಲಿ ಮಹತ್ವದ ಬದಲಾವಣೆ ತಂದಿರುವ ಬಿಸಿಸಿಐ 5 ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಹಾಗೂ 1 ಆರ್ಟಿಎಂ ಕಾರ್ಡ್ (RTM Card) ಬಳಕೆಗೆ ಅನುಮತಿ ನೀಡಿದೆ. ಈ ಪೈಕಿ ಇಬ್ಬರು ಆಟಗಾರರ ( ಮೊದಲು ಮತ್ತು 4ನೇ ರಿಟೇನ್ ಆಟಗಾರ) ತಲಾ 18 ಕೋಟಿ ರೂ. ಪಡೆಯಲಿದ್ದಾರೆ. 2 ಮತ್ತು 5ನೇ ಆಟಗಾರ ತಲಾ 14 ಕೋಟಿ ರೂ. ಹಾಗೂ 3ನೇ ರಿಟೇನ್ ಆಟಗಾರ 11 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ 5 ವರ್ಷ ಪೂರೈಸಿದ ಆಟಗಾರರನ್ನು ಅನ್ಕ್ಯಾಪ್ಡ್ ಪ್ಲೇಯರ್ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಅವರು ನಿಯಮದಂತೆ 4 ಕೋಟಿ ರೂ. ಮಾತ್ರವೇ ಸಂಭಾವನೆ ಪಡೆಯಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.
ಈ ಹಿನ್ನೆಲೆಯಲ್ಲಿ ಹಾಲಿ ನಾಯಕನಾಗಿರುವ ಹಾರ್ದಿಕ್ ಪಾಂಡ್ಯರನ್ನ ಮುಂಬೈ ಫ್ರಾಂಚೈಸಿ ಮೊದಲ ರಿಟೇನ್ ಮಾಡಿಕೊಂಡರೆ, ಸದ್ಯ 15 ಕೋಟಿಗೆ ಖರೀದಿಯಾಗಿರುವ ಪಾಂಡ್ಯರ ಮೌಲ್ಯ 18 ಕೋಟಿ ರೂ. ಏರಿಕೆಯಾಗಲಿದೆ. ಈ ದುಬಾರಿ ಬೆಲೆಗೆ ಪಾಂಡ್ಯ ಅರ್ಹರೇ ಎಂಬ ಪ್ರಶ್ನೆಯೂ ಎದ್ದಿದೆ? ಏಕೆಂದರೆ 2024ರ ಆವೃತ್ತಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ ಪಾಂಡ್ಯ 14 ಪಂದ್ಯಗಳಿಂದ 216 ರನ್ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಅಲ್ಲದೇ ಲೀಗ್ ಸುತ್ತಿನಲ್ಲೇ ಮುಂಬೈ ಇಂಡಿಯನ್ಸ್ ಹೊರಬಿದ್ದಿತ್ತು.