ಬೆಂಗಳೂರು: ನಮ್ಮ ಎಲ್ಲಾ ನ್ಯಾಯಾಲಗಳ ಜೊತೆಗೆ ನಮ್ಮ ಮನದಲ್ಲಿ ಒಂದು ದೊಡ್ಡ ನ್ಯಾಯಾಲಯವಿದೆ. ಅದೇ ಆತ್ಮಶಕ್ತಿಯ ನ್ಯಾಯಾಲಯ ಎಂದು ಸಿಎಂ ಹೇಳಿದ್ದಾರೆ ಈ ನ್ಯಾಯಾಲಯದಂತೆ ನಾವು ನಡೆಯಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ಹೇಳಿದ್ದಾರೆ.
ಭಾರತ್ ಜೋಡೋ ಭವನದಲ್ಲಿ ನಡೆದ ಗಾಂಧಿ ಜಯಂತಿ (Gandhi Jayanti) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವಿಂದು ಬಹಳ ಪುಣ್ಯದ ವರ್ಷದಲ್ಲಿದ್ದೇವೆ. ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ ಬೆಳಗಾವಿ ಅಧಿವೇಶನಕ್ಕೆ ಈಗ ಶತಮಾನ ತುಂಬಿದೆ. ಈ ಸಂದರ್ಭವನ್ನು ನಾವು ಬಳಸಿಕೊಂಡು ಗಾಂಧಿ ಅವರು ಹಾಕಿಕೊಟ್ಟ ದಾರಿ ಹಾಗೂ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಕಾಶ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ ಎಂದರು.
ಈ ದೇಶಕ್ಕೆ ಕಾಂಗ್ರೆಸ್ (Congress) ಹಾಕಿಕೊಟ್ಟಿರುವ ಬುನಾದಿ, ಗಾಂಧಿ ಅವರ ತತ್ವ, ಆದರ್ಶವೇ ನಮ್ಮ ಆಸ್ತಿ. ಈ ಸಂದರ್ಭದಲ್ಲಿ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಈಗ ಎಐಸಿಸಿ ಅಧ್ಯಕ್ಷರಾಗಿರುವುದು ಬಹಳ ವಿಶೇಷ. ಡಿಸೆಂಬರ್ ಕೊನೆ ವಾರದಲ್ಲಿ ಬೆಳಗಾವಿಯಲ್ಲಿ ವಿಶೇಷವಾದ ಎಐಸಿಸಿ ಅಧಿವೇಶನ ಮಾಡಲಿದ್ದು, ಇದಕ್ಕೆ ಎಐಸಿಸಿ ನಾಯಕರನ್ನು ಆಹ್ವಾನಿಸುತ್ತೇನೆ. ಈ ವಿಚಾರವಾಗಿ ಪಕ್ಷದ ಹಿರಿಯ ನಾಯಕರ ಸಮಿತಿ ಮಾಡಿದ್ದೇನೆ. ಇಂದು ಗಾಂಧಿ ನಡಿಗೆ ಮೂಲಕ ಹೆಜ್ಜೆ ಇಟ್ಟಿದ್ದೇವೆ. ಹಿಂದೆ ದೇಶಪಾಂಡೆ ಅವರು ಅಧ್ಯಕ್ಷರಾಗಿದ್ದಾಗ ದಂಡಿ ಮಾರ್ಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಅದರ ನೆನಪಿನ ಆಧಾರದ ಮೇಲೆ ಇಂದು ಪಕ್ಷ ಹಾಗೂ ಸರ್ಕಾರದ ವತಿಯಿಂದ ಈ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು ಎಂದು ಹೇಳಿದರು.