ಬೆಂಗಳೂರು: ರಾಜ್ಯದ ಎಲ್ಲ ಚಾರಣ (Trekking) ಕೈಗೊಳ್ಳುವ ಸ್ಥಳಗಳಿಗೆ ಒಂದೇ ವೇದಿಕೆಯಲ್ಲಿ ಟಿಕೆಟ್ (Ticket) ಖರೀದಿಸುವ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ (Forest Department) ಆರಂಭಿಸಿದ ಅರಣ್ಯ ವಿಹಾರ ವೆಬ್ಸೈಟ್ಗೆ (Aranyavihaara Website) ಇಂದು ಚಾಲನೆ ನೀಡಲಾಗಿದೆ.
ವಿಕಾಸ ಸೌಧದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ಅವರು ಅರಣ್ಯ ವಿಹಾರ ವೆಬ್ಸೈಟ್ ಲೋಕಾರ್ಪಣೆ ಮಾಡಿದರು. ಒಂದು ಬಾರಿಗೆ 300 ಜನರಿಗೆ ಅವಕಾಶ ಸಿಗಲಿದ್ದು, ಸಂಚಾರ ದಟ್ಟಣೆ ಸೇರಿ ವಿವಿಧ ಕಾರಣಕ್ಕೆ ಮಿತಿ ಹಾಕಲಾಗಿದೆ.
40 ಲಕ್ಷ ರೂ. ಮೊತ್ತದಲ್ಲಿ ಅಂತರ್ಜಾಲ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಐದು ಚಾರಣ ಪಥ ಇದೆ. ಇನ್ನೂ 18 ಚಾರಣ ಪಥ ಆಗಬೇಕು. ರಾಜ್ಯದಲ್ಲಿ 40 ಚಾರಣ ಪಥ ಗುರುತಿಸಬಹುದು. ಎಲ್ಲಾ ಚಾರಣ ಪ್ರದೇಶಗಳಿಗೆ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಇಂದು ಪರಿಸರ ಪ್ರವಾಸೋದ್ಯಮ ಸಾಕಷ್ಟು ಅವಕಾಶಗಳಿವೆ. ಬಾಬಾಬುಡನಗಿರಿ ಸೇರಿ 23 ಕಡೆ ಚಾರಣ ಪಥ ನಡೆಯುತ್ತಿತ್ತು. ಈ ಹಿಂದೆ ಅನೇಕ ಕಡೆ ಚಾರಣ ಪಥ ದಲ್ಲಿ ಅವಘಡ ನಡೆದಿತ್ತು. ಹೀಗಾಗಿ ಐದು ಚಾರಣ ಪಥಕ್ಕೆ ಆನ್ಲೈನ್ ವ್ಯವಸ್ಥೆ ಮಾಡುತ್ತಿದ್ದೇವೆ. ಪರಿಸರ ಪ್ರವಾಸೋದ್ಯಮದ ಕಾರಣದಿಂದ ಅರಣ್ಯಕ್ಕೆ ಧಕ್ಕೆ ಆಗಬಾರದು. ಹಲವು ಕಡೆ ನಕಲಿ ಟಿಕೆಟ್ ಮಾರಾಟ ಆಗುತ್ತಿತ್ತು. ಬ್ಲ್ಯಾಕ್ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಬುಕ್ಕಿಂಗ್ ಹೇಗೆ?
ಒಂದು ಟೀಂನಲ್ಲಿ 10 ಜನರು ಇರಬಹುದು, ಗುಂಪಿನ ನಾಯಕ ಬುಕ್ ಮಾಡಿದರೆ ಆತನ ಮೊಬೈಲಿಗೆ ಬುಕ್ಕಿಂಗ್ ಒಟಿಪಿ ಬರುತ್ತದೆ. ದೊಡ್ಡ ಚಾರಣಕ್ಕೆ 350+ ಜಿಎಸ್ಟಿ, ಸಣ್ಣ ಚಾರಣಕ್ಕೆ 250+ ಜಿಎಸ್ಟಿ ರೂ. ದರ ನಿಗದಿ ಮಾಡಲಾಗಿದೆ.
ಚಾರಣಕ್ಕೆ ತೆರಳುವ ಎರಡು ದಿನಗಳ ಮುನ್ನ ಬುಕ್ ಮಾಡಬೇಕು. 48 ಗಂಟೆ ಮುಂಚಿತವಾಗಿ ಟಿಕೆಟ್ ರದ್ದು ಮಾಡಬಹುದು. ರದ್ದು ಮಾಡಿದರೆ 75% ಟಿಕೆಟ್ ಹಣ ಮರುಪಾವತಿ ಆಗಲಿದೆ.
ಆರಂಭದಲ್ಲಿ ಯಾವ ಸ್ಥಳಕ್ಕೆ ಹೋಗಬಹುದು?
ಸುಬ್ರಹ್ಮಣ್ಯ-ಕುಮಾರ ಪರ್ವತ, ಬೀದಳ್ಳಿಯಿಂದ-ಕುಮಾರ ಪರ್ವತ, ತಲಕಾವೇರಿಯಿಂದ-ನಿಶಾನಿ ಮೊಟ್ಟೆ , ಚಾಮರಾಜನಗರದಿಂದ-ನಾಗಮಲೈಗೆ ಈ ವೆಬ್ಸೈಟ್ ಮೂಲಕ ಟಿಕೆಟ್ ಖರೀದಿಸಬಹುದು.
ಅರಣ್ಯ ವಿಹಾರ ವೆಬ್ಸೈಟ್ಗೆ ಭೇಟಿ ನೀಡಿ: www.aranyavihaara.karnataka.gov.in