ಹಿಂದೂ ಸಮುದಾಯಕ್ಕೆ ನವರಾತ್ರಿ ಎಂಬುದು ಒಂದು ಮುಖ್ಯ ಹಬ್ಬ. ದೇಶದ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ನವರಾತ್ರಿಯನ್ನು ಆಚರಣೆ ಮಾಡಲಾಗುತ್ತದೆ. ನವರಾತ್ರಿಯನ್ನು ಒಂಭತ್ತು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಹತ್ತನೇ ದಿನವನ್ನು ವಿಜಯ ದಶಮಿ ಎಂದು ಕರೆಯಲಾಗುತ್ತದೆ. ಈ ಒಂಭತ್ತು ದಿನಗಳ ಕಾಲದಲ್ಲಿ ಭಕ್ತ ಜನರು ದೇವಿಯ 9 ಅವತಾರಗಳನ್ನು ಪೂಜಿಸುತ್ತಾರೆ. ಶುಕ್ಲ ಪಕ್ಷದಲ್ಲಿ ಈ ಹಬ್ಬ ಆಚರಿಸಲಾಗುತ್ತದೆ.
ಜಗನ್ಮಾತೆ ದುರ್ಗೆಯ ಐದನೇ ಸ್ವರೂಪವನ್ನು ಸ್ಕಂದಮಾತಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ವಾಸ್ತವಿಕವಾಗಿ ಇದು ಜಗತ್ ಕಲ್ಯಾಣ ರೂಪ. ತಾರಕಾಸುರನ ಉಪಟಳದಿಂದ ದೇವತೆಗಳು, ಭೂಮಿಯ ಜನರು ದುಃಖಪೀಡಿತರಾಗಿರುತ್ತಾರೆ. ತಾರಕಾಸುರನು ಬ್ರಹ್ಮನ ವರಬಲದಿಂದ ಕೊಬ್ಬಿರುತ್ತಾನೆ. ಶಿವ ಪಾರ್ವತಿಯರ ಕಂದನಿಂದ ಮಾತ್ರವೇ ತನಗೆ ಮರಣ ಎಂದು ಅವನು ವರ ಪಡೆದಿರುತ್ತಾನೆ. ಹಾಗಾಗಲು ಸಾಧ್ಯವಿಲ್ಲ ಎಂಬುದು ಅವನ ಎಣಿಕೆ.
ಆದರೆ ಪಾರ್ವತಿ ಹಾಗೂ ಶಿವನ ಮದುವೆಯಾದ ಬಳಿಕ, ಸ್ಕಂದ ಅಥವಾ ಷಣ್ಮುಖನು ಜನ್ಮ ತಾಳುತ್ತಾನೆ. ಷಣ್ಮುಖನನ್ನೇ ತಮ್ಮ ದೇವಸೈನ್ಯಕ್ಕೆ ದೇವತೆಗಳು ಸೇನಾನಿಗಳಾಗಿಸಿಕೊಳ್ಳುತ್ತಾರೆ. ದೇವಿಯೂ ಸೇರಿದಂತೆ ಸರ್ವರೂ ಈತನಿಗೆ ತಮ್ಮ ಶಕ್ತಿಗಳನ್ನು ನೀಡುತ್ತಾರೆ. ಸ್ಕಂದನು ದೇವಸೇನಾ ಸಮೇತನಾಗಿ ತೆರಳಿ, ತಾರಕಾಸುರನನ್ನು ಘೋರ ಯುದ್ಧದಲ್ಲಿ ಕೊಂದು ಮರಳುತ್ತಾನೆ. ಹೀಗೆ ಜಗತ್ಕಲ್ಯಾಣಕಾರಕನಾದ ಸ್ಕಂದನನ್ನು ಹೆತ್ತು ಕೊಟ್ಟ ಈಕೆ ಸ್ಕಂದಮಾತೆ ಎನಿಸಿಕೊಳ್ಳುತ್ತಾಳೆ.
ಸ್ಕಂದ ಮಾತೆಯು ಬುಧಗ್ರಹದ ಮೇಲೆ ಅಧಿಪತ್ಯವನ್ನು ಹೊಂದಿರುತ್ತಾಳೆ. ಶುದ್ಧಮನಸ್ಸಿನಿಂದ, ಭಕ್ತಿಯಿಂದ ಯಾರು ಆರಾಧನೆ ಮಾಡುತ್ತಾರೋ ಅವರಿಗೆ ದೇವಿಯು ಹೆಸರು, ಸಂಪತ್ತು ಹಾಗೂ ಸಮೃದ್ಧಿಯನ್ನು ನೀಡುತ್ತಾಳೆ. ಜನ್ಮ ಕುಂಡಲಿಯಲ್ಲಿ ಬುಧನು ಪ್ರತಿಕೂಲ ಸ್ಥಾನದಲ್ಲಿದ್ದರೆ ಉಂಟಾಗುವ ತೊಂದರೆಯನ್ನು ದೇವಿಯು ನಿವಾರಿಸುತ್ತಾಳೆ.
ಸ್ಕಂದ ಮಾತೆಯ ರೂಪ:
ಸ್ಕಂದ ಮಾತೆಗೆ ನಾಲ್ಕು ಭುಜಗಳಿದ್ದು, ಒಂದು ಕೈಯಲ್ಲಿ ಸ್ಕಂದನನ್ನು ಹಾಗೂ ಎರಡು ಕೈಯಲ್ಲಿ ಕಮಲವನ್ನು ಹಿಡಿದಿರುತ್ತಾಳೆ. ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು, ಸದಾ ತನ್ನ ಭಕ್ತರಿಗೆ ಆಶೀರ್ವಾದ ಮಾಡುತ್ತಾಳೆ. ಇವಳ ಶರೀರದ ಬಣ್ಣವೂ ಸಂಪೂರ್ಣವಾಗಿ ಬೆಳ್ಳಗಿದ್ದು, ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ. ಈ ಕಾರಣಕ್ಕಾಗಿ ಇವಳನ್ನು ಪದ್ಮಾಸನಾ ದೇವಿ ಎಂದು ಕರೆಯುತ್ತಾರೆ. ಸಿಂಹವು ಸ್ಕಂದಮಾತೆಯ ವಾಹನವಾಗಿದೆ.
ಸ್ಕಂದ ಮಾತೆಯ ಪೂಜಾ ವಿಧಾನ:
ಸ್ಕಂದ ಮಾತೆಗೆ ಕೆಂಪು ಬಣ್ಣದ ಹೂವು ವಿಶೇಷವಾಗಿ ಗುಲಾಬಿ ಹೂವು ಪ್ರಿಯವಾದುದು. ಸ್ಕಂದ ಮಾತೆ ಹಾಗೂ ಮಾತೆಯ ಪುತ್ರ ಸ್ಕಂದನ ಆಶೀರ್ವಾದಕ್ಕೆ ವಿಶೇಷ ಪೂಜೆಯನ್ನು ಈ ದಿನ ಮಾಡಬೇಕು. ಷೋಡಶೋಪಚಾರ ಪೂಜೆಯ ನಂತರ ಆರತಿಯೊಂದಿಗೆ ಪೂಜೆಯನ್ನು ಮುಕ್ತಾಯಗೊಳಿಸಬೇಕು. ಜೀವನದ ಸದ್ಗತಿಗೆ ಹಾಗೂ ಆಧ್ಯಾತ್ಮಿಕ ಸಂತುಷ್ಟಿಗಾಗಿ ಈ ಅವತಾರಕ್ಕೆ ಆರಾಧನೆ ಮಾಡಲಾಗುವುದು.
ತಾಯಿ ಸ್ಕಂದಮಾತೆಯ ನೆಚ್ಚಿನ ಬಣ್ಣ, ಹೂವು ಮತ್ತು ಭೋಗ
ದುರ್ಗಾ ದೇವಿಯ ಸ್ಕಂದಮಾತೆ ರೂಪದ ಆರಾಧನೆಯಿಂದ ಒಬ್ಬನು ಅಂತಿಮ ಶಾಂತಿ ಮತ್ತು ಸಂತೋಷವನ್ನು ಅನುಭವಿಸುತ್ತಾನೆ. ತಾಯಿ ಸ್ಕಂದಮಾತೆಗೆ ಬಿಳಿ ಬಣ್ಣ ಅತ್ಯಂತ ಪ್ರಿಯವಾದ ಬಣ್ಣವಾಗಿದೆ. ನೀವು ಸ್ಕಂದ ಮಾತೆಯನ್ನು ಮೆಚ್ಚಿಸಲು ಬಯಸಿದರೆ, ಆಕೆಯನ್ನು ಪೂಜಿಸುವ ಸಮಯದಲ್ಲಿ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಈ ದಿನ ನೀವು ಸ್ಕಂದಮಾತೆಗೆ ಬಾಳೆಹಣ್ಣುಗಳನ್ನು ಅರ್ಪಿಸಬೇಕು. ಹಾಗೂ ಖೀರ್ನ್ನು ನೈವೇದ್ಯವಾಗಿ ನೀಡಬೇಕು.
ಸ್ಕಂದಮಾತೆ ಮಂತ್ರ
– ”ಯಾ ದೇವೀ ಸರ್ವಭೂತೇಷು ಮಾ ಸ್ಕಂದಮಾತಾ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||”
– ”ಹ್ರೀಂ ಕ್ಲೀಂ ಸ್ವಾಮಿನ್ಯೈ ನಮಃ”
– ”ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕತದ್ವಯಾ|
ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನಿ||
ಓಂ ದೇವಿ ಸ್ಕಂದಮಾತಾಯೈ ನಮಃ”
ನವರಾತ್ರಿಯ ಐದನೇ ದಿನದಂದು ಸ್ಕಂದಮಾತೆಯ ಪೂಜೆ ಮಾಡಿದರೆ ಮನಃಶುದ್ಧಿಯಾಗುವುದು. ದೇವಿಯು ಬುದ್ಧಿಶಕ್ತಿ ಹೆಚ್ಚುವಂತೆ ಆಶೀರ್ವಾದ ಮಾಡುತ್ತಾಳೆ. ಈ ದೇವಿಯ ಆರಾಧನೆಯಿಂದ ಭಕ್ತರು ಯಶಸ್ಸು ಹಾಗೂ ಖ್ಯಾತಿಯನ್ನು ಪಡೆಯುತ್ತಾರೆ. ಅಲ್ಲದೇ ಯಶಸ್ಸಿನ ಹಾದಿಯಲ್ಲಿ ಮುಂದುವರಿಯುತ್ತಾರೆ.