ನವದೆಹಲಿ: ಐಐಟಿ ಧನ್ಬಾದ್ನಲ್ಲಿ ಶುಲ್ಕ ಪಾವತಿಸಲು ಹಣವಿಲ್ಲದೇ ಪ್ರವೇಶ ಪಡೆಯಲು ಸಾಧ್ಯವಾಗದೇ ಕಂಗಾಲಾಗಿದ್ದ ದಲಿತ ಯುವಕನಿಗೆ ಕೊನೆಗೂ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ಸಿಕ್ಕಿದೆ. ಉತ್ತರ ಪ್ರದೇಶದ ಮುಜಾಫರ್ನಗರದ 18ರ ದಲಿತ ಯುವಕ ಈ ವರ್ಷ ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಕೋರ್ಸ್ಗೆ ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದ. ತೀರ ಬಡತನದ ಕುಟುಂಬ ಇವರದು. ದಿನಗೂಲಿ ಕಾರ್ಮಿಕರಾದ ಯುವಕನ ತಂದೆ 17,500 ರೂ. ಪ್ರವೇಶ ಶುಲ್ಕವನ್ನು ಸಕಾಲದಲ್ಲಿ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ.
ಯುವಕನಿಗೆ ತಾನು ಕಷ್ಟಪಟ್ಟು ತೇರ್ಗಡೆ ಹೊಂದಿರುವ ಸ್ಥಾನವನ್ನು ಕಳೆದುಕೊಳ್ಳಲು ಇಷ್ಟವಿರಲಿಲ್ಲ. ಆ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕೆ ಮೂರು ತಿಂಗಳ ಕಾಲ ಆತನ ತಂದೆ ಎಸ್ಸಿ/ಎಸ್ಟಿ ಆಯೋಗ, ಜಾರ್ಖಂಡ್ ಮತ್ತು ಮದ್ರಾಸ್ ಹೈಕೋರ್ಟ್ಗೆ ನ್ಯಾಯಕ್ಕಾಗಿ ಅಲೆದರು. ಅಲ್ಲಿ ಏನೂ ಪ್ರಯೋಜನ ಆಗದಿದ್ದಾಗ, ಕೊನೆಗೆ ಸುಪ್ರೀಂ ಕೋರ್ಟ್ ಮೊರೆ ಹೋದರು. ಈ ಹಿನ್ನೆಲೆ ಶಿಕ್ಷಣ ಸಂಸ್ಥೆಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಬಿ.ಟೆಕ್ ಕೋರ್ಸ್ಗೆ ಆತನಿಗೆ ಪ್ರವೇಶ ಕಲ್ಪಿಸುವುದಕ್ಕೆ ಕೋರ್ಟ್ ನಿರ್ದೇಶನ ನೀಡಿದ್ದು, ಇಂತಹ ಯುವ ಪ್ರತಿಭಾನ್ವಿತ ಯುವಕರು ಬಿಟ್ಟು ಹೋಗುವುದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಿಜೆಐ ಡಿ.ವೈ ಚಂದ್ರಚೂಡ್, ನ್ಯಾ.ಜೆಬಿ ಪರ್ದಿವಾಲ ಹಾಗೂ ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ. ಅಲ್ಲದೇ ಯುವಕನಿಗೆ ಕೋರ್ಟ್, ಆಲ್ ದಿ ಬೆಸ್ಟ್ ಹೇಳಿದೆ.
ಯುವಕ ಅತುಲ್ ಕುಮಾರ್ ಅವರನ್ನು ತನ್ನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಬಿ.ಟೆಕ್ ಕೋರ್ಸ್ಗೆ ಸೇರಿಸಿಕೊಳ್ಳಲು ಐಐಟಿ ಧನ್ಬಾದ್ಗೆ (IIT Dhanbad) ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಇದಕ್ಕಾಗಿ ಕೋರ್ಟ್, ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ ಅಸಾಮಾನ್ಯ ಅಧಿಕಾರವನ್ನು ಬಳಸಿತು. ಸಂವಿಧಾನದ 142 ನೇ ವಿಧಿಯು ನ್ಯಾಯದ ಹಿತದೃಷ್ಟಿಯಿಂದ ಯಾವುದೇ ಆದೇಶವನ್ನು ಹೊರಡಿಸಲು ಉನ್ನತ ನ್ಯಾಯಾಲಯಕ್ಕೆ ಅಧಿಕಾರ ನೀಡುತ್ತದೆ.
ಈ ಬಗ್ಗೆ ಮಾಧ್ಯಮದೊಂದಿಗೆ ಸಂತೋಷ ಹಂಚಿಕೊಂಡ ಯುವಕ ಅತುಲ್, ನನಗೆ ಪ್ರವೇಶ ಸಿಕ್ಕಿರುವುದು ತುಂಬಾ ಸಂತೋಷವಾಗಿದೆ. ಹಣಕಾಸಿನ ಸಮಸ್ಯೆಯಿಂದ ನನ್ನ ಸೀಟು ಕಸಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ‘ಹಳಿ ತಪ್ಪಿದ ರೈಲು ಮತ್ತೆ ಹಳಿ ಸೇರಿದೆ’. ನಾನು ಕಷ್ಟಪಟ್ಟು ಕೆಲಸ ಮಾಡಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗುತ್ತೇನೆ ಎಂದು ಹರುಷ ವ್ಯಕ್ತಪಡಿಸಿದ್ದಾರೆ.