ನವದೆಹಲಿ:- ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶದ ಪ್ರಕಾರ ವರ್ಷದಿಂದ ವರ್ಷಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬಂದಿದೆ. ಜಾಗತಿಕವಾಗಿ 1.2 ಕೋಟಿಗೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.
ಡೆಂಗ್ಯೂ ಈಡಿಸ್ ಈಜಿಪ್ಟಿ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು. ಡೆಂಗ್ಯೂವಿನಿಂದ ಹೆಚ್ಚಿನ ಜನರಲ್ಲಿ ಸಾಮಾನ್ಯ ರೋಗಲಕ್ಷಣಗಳು ಕಂಡು ಬರುತ್ತದೆ. ಅಂದರೆ ಜ್ವರ, ತೀವ್ರ ತಲೆನೋವು, ಸ್ನಾಯು ಮತ್ತು ಕೀಲು ನೋವುಗಳು, ವಾಕರಿಕೆ ಮತ್ತು ವಾಂತಿ, ಕಣ್ಣುಗಳ ಹಿಂದೆ ನೋವು ಮತ್ತು ದದ್ದುಗಳು ಕಾಣಿಸಿಕೊಳ್ಳುತ್ತವೆ. ತೀವ್ರ ತರವಾದ ಪ್ರಕರಣಗಳಲ್ಲಿ, ಸೋಂಕು ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗಬಹುದು. ಅಲ್ಲದೇ ಸರಿಯಾದ ಚಿಕಿತ್ಸೆ ಸಿಗದಿದ್ದರೆ ಸಾವು ಕೂಡ ಸಂಭವಿಸಲಿದೆ.
ರಕ್ತನಾಳಗಳಿಗೆ ಡೆಂಗ್ಯೂ ವೈರಸ್ ಹಾನಿಯುಂಟು ಮಾಡುತ್ತದೆ. ರಕ್ತಕಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಪರಿಣಾಮವಾಗಿ ಅಂಗಾಂಗ ವೈಫಲ್ಯವಾಗುತ್ತದೆ.
ಈ ವರ್ಷದ ಆಗಸ್ಟ್ವರೆಗೆ ಜಾಗತಿಕವಾಗಿ 1.2 ಕೋಟಿಗೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿವೆ. ಡೆಂಗ್ಯೂನಿಂದ 6,991 ಸಾವುಗಳು ದಾಖಲಾಗಿವೆ ಎಂದು WHO ದ ಜಾಗತಿಕ ಡೆಂಗ್ಯೂ ವರದಿಯ ಅಂಕಿಅಂಶಗಳು ತಿಳಿಸಿವೆ.
ಇದು ಕಳೆದ ವರ್ಷ ದಾಖಲಾದ 52.7 ಲಕ್ಷ ಪ್ರಕರಣಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷಕ್ಕಿಂತ ಮೊದಲು, ಕಳೆದ ದಶಕದಲ್ಲಿ, ಸುಮಾರು 20-30 ಲಕ್ಷ ವಾರ್ಷಿಕ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.