ಹುಬ್ಬಳ್ಳಿ: ಸ್ವಚ್ಚತಾ ಅಭಿಯಾನದ ಅಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಂದ ಮಂಗಳವಾರ ಗೋಕುಲ ರಸ್ತೆಯಲ್ಲಿರುವ ಬಸ್ ನಿಲ್ದಾಣದಲ್ಲಿ ಸ್ವಯಂಪ್ರೇರಿತ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲಾಯಿತು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಎಲ್ಲಾ 5 ಡಿಪೊಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಅದರ ಭಾಗವಾಗಿ ಗಾಂಧೀ ಜಯಂತಿಯ ಮುನ್ನಾ ದಿನವಾದ ಅಕ್ಟೋಬರ್ 1ರಂದು ಮಂಗಳವಾರ ಗೋಕುಲ ರಸ್ತೆಯಲ್ಲಿರುವ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲಾಯಿತು
ದೇವಾಲಯದಲ್ಲೇ 75 ವರ್ಷದ ಅರ್ಚಕನ ಕೊಲೆ: ಪ್ರಕರಣ ತನಿಖೆಗೆ ಪೊಲೀಸರು ಮೀನಾಮೇಷ!
ನಿತ್ಯ ಬಸ್ಸುಗಳ ನಿರ್ವಹಣೆ, ದುರಸ್ತಿ ಮಾಡುವ ವಿಭಾಗೀಯ ಕಾರ್ಯಗಾರದ ತಾಂತ್ರಿಕ ಸಿಬ್ಬಂದಿಗಳು, ಘಟಕಗಳ ಚಾಲಕರು, ನಿರ್ವಾಹಕರು, ಮೇಲ್ವಿಚಾರಕರು ಹಾಗೂ ಅಧಿಕಾರಿಗಳು ಸೇರಿದಂತೆ ಸಾರಿಗೆ ಸಿಬ್ಬಂದಿಗಳು ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ವಿಭಾಗೀಯ ನಿಯಂತ್ರಣಧಿಕಾರಿ ಎಚ್. ರಾಮನಗೌಡರ ಮಾತನಾಡಿ, ಬಸ್ ಮತ್ತು ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಲು ನಿರಂತರವಾಗಿ ಕ್ರಮ ವಹಿಸಲಾಗುತ್ತದೆ.ಇದಕ್ಕೆ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ. ಬಸ್ ನಿಲ್ದಾಣದಲ್ಲಿ ಧೂಮಪಾನ, ಗುಟಕಾ- ತಂಬಾಕು ಸೇವನೆ, ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಲಾಗುತ್ತದೆ. ತಿಂಡಿ, ತಿನಿಸುಗಳ ಕವರ್ ಗಳು, ಹಾಳೆ, ನೀರಿನ ಬಾಟಲ್ ಗಳನ್ನು ಎಲ್ಲೆಂದರಲ್ಲಿ ಎಸೆಯದೆ ನಿಗದಿತ ಸ್ಥಳಗಳಲ್ಲಿ ಕಸದ ಡಬ್ಬಿಗಳಲ್ಲಿ ಹಾಕಬೇಕು. ಸ್ವಚ್ವತೆ ಕಾಪಾಡಲು ಸಾರ್ವಜನಿಕರು ಸಂಸ್ಥೆಯೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
ಅಧಿಕಾರಿಗಳಾದ ಪಿ.ವೈ.ಗಡಾದ, ರಮೇಶ ಕರಿಂಡಿ, ಸದಾನಂದ ಒಡೆಯರ, ಸುನಿಲ್ ವಾಡೇಕರ, ಶಿವಕುಮಾರ್,ಐ.ಜಿ. ಮಾಗಾಮಿ, ಡಿಪೋ ಮ್ಯಾನೇಜರ್ ಗಳಾದ ಟಿ.ಹೆಚ್. ಮುನ್ನಾ ಸಾಬ್, ರೋಹಿಣಿ ಬೇವಿನಕಟ್ಟಿ, ಬಿ.ಕೆ. ನಾಗರಾಜ, ನಿಲ್ದಾಣಾಧಿಕಾರಿ ವಿ.ಎಸ್.ಹಂಚಾಟೆ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.