ಹೃದಯದ ಲಬ್ ಡಬ್ ಲಬ್ ಡಬ್ ಬಡಿತವೇ ಜೀವಂತಿಕೆಯ ಸೆಲೆ. ಇದು ನಿರಂತರವಾಗಿದ್ದರೇನೆ ಜೀವನ. ಈ ಹೃದಯ ಎಲ್ಲಾ ಭಾವನೆಗಳಿಗೂ ಮೂಲ. ಆದ್ದರಿಂದಲೇ ಹೃದಯವಂತರು, ಹೃದಯಹೀನರು ಎಂಬ ಪದಗಳು ಹುಟ್ಟಿಕೊಂಡಿರೋದು. ಇನ್ನು ಹೃದಯಗಳ ಕೊಡು ಕೊಳ್ಳುವಿಕೆಯಂತು ಮತ್ತೊಂದು ಗಾಢ ಸಂಬಂಧ ಬೆಸೆಯಲು ಕಾರಣವಾಗಿವೆ. ಇಂಥ ಅಮೂಲ್ಯ ಹೃದಯವು ಸದಾ ಆರೋಗ್ಯವಾಗಿರಬೇಕು ಎಂದೇ ಎಲ್ಲರು ಬಯಸೋದು. ಇಂಥ ಹೃದಯಕ್ಕೂ ಒಂದು ದಿನವಿದೆ ಎಂದು ನಿಮಗೆ ಗೊತ್ತೇ? ಹೌದು. ಸೆಪ್ಟೆಂಬರ್ 29 ಅನ್ನು ವಿಶ್ವದೆಲ್ಲೆಡೆ ಹೃದಯ ದಿನವನ್ನಾಗಿ ಆಚರಿಸಲಾಗುತ್ತದೆ.
ವಿಶ್ವ ಹೃದಯ ದಿನವನ್ನು ಏಕೆ ಆಚರಿಸಲಾಗುತ್ತದೆ?
ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಹೃದಯರಕ್ತನಾಳಗಳ ಕಾಯಿಲೆ, ಅದರ ತಡೆಗಟ್ಟುವಿಕೆ ಮತ್ತು ಜನರ ಮೇಲೆ ಆರೋಗ್ಯದ ಮೇಲೆ ಬೀರುವ ಅದರ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವುದು. ಹೃದಯಾಘಾತ, ಪಾರ್ಶ್ವವಾಯು ಸೇರಿದಂತೆ ಹೃದಯ ರಕ್ತನಾಳಗಳ ಕಾಯಿಲೆ ಪ್ರತಿವರ್ಷ 17.8 ವಿಲಿಯನ್ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ.
Health Tips: ಸೀಮೆ ಬದನೆಕಾಯಿ ಸೇವನೆಯ ಆರೋಗ್ಯಕರ ಪ್ರಯೋಜನಗಳೇನು ಗೊತ್ತಾ..?
ವರ್ಲ್ಡ್ ಹಾರ್ಟ್ ಫೆಡರೇಷನ್ ಪ್ರಕಾರ, 80% ಅಕಾಲಿಕ ಮರಣಗಳು ಹೃದಯ ರಕ್ತನಾಳಗಳ ಕಾಯಿಲೆಯಿಂದಾಗಿ ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಅದನ್ನು ನಿಯಂತ್ರಿಸಲು ಜನರು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಹೃದಯ ದಿನದ ಇತಿಹಾಸ:
ವರ್ಲ್ಡ್ ಹರ್ಟ್ ಫೆಡರೇಶನ್ ಮಾಜಿ ಅಧ್ಯಕ್ಷ ಆಂಟೋನಿ ಬೇಯೆಸ್ ಡಿ ಲೂನಾ ಅವರು ವಿಶ್ವ ಹೃದಯ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಪರಿಚಯಿಸಿದರು. ಇವರ ಪರಿಕಲ್ಪನೆಯಡಿಯಲ್ಲಿ ವರ್ಲ್ಡ್ ಹರ್ಟ್ ಫೆಡರೇಶನ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಜಂಟಿಯಾಗಿ ವಿಶ್ವ ಹೃದಯ ದಿನದ ಆಚರಣೆಯನ್ನು 24 ಸೆಪ್ಟೆಂಬರ್ 2000 ರಂದು ಪ್ರಾರಂಭಿಸಿತು.
ನಂತರ ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರದಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತಿತ್ತು. 2014 ರಿಂದ ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ 29 ರಂದು ಆಚರಿಸಲು ಪ್ರಾರಂಭಿಸಲಾಯಿತು. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ವಿಶ್ವ ಹೃದಯ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ.
ವಿಶ್ವ ಹೃದಯ ದಿನದ ಮಹತ್ವ:
ಜಗತ್ತಿನಾದ್ಯಂತ ಹೃದ್ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿನ ಅನಾರೋಗ್ಯಕರ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಗಳಿಂದ ಹೃದಯ ಸಂಬಂಧಿ ಕಾಯಿಲೆಯ ಅಪಾಯವೂ ಹೆಚ್ಚುತ್ತಿದೆ. ಎಲ್ಲಾ ವಯಸ್ಸಿನ ಜನರು ಕೂಡಾ ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಹೃದಯರಕ್ತನಾಳಗಳ ಕಾಯಿಲೆಯಿಂದಾಗಿ ಹೃಯಾಘಾತದ ಅಪಾಯವೂ ಹೆಚ್ಚಾಗುತ್ತಿದೆ.
ಪ್ರತಿವರ್ಷ ಸುಮಾರು 18.6 ಮಿಲಿಯನ್ ಜನರು ಹೃದ್ರೋಗ ಅಥವಾ ಪಾರ್ಶ್ವವಾಯುವಿಗೆ ಬಲಿಯಾಗಿ ಸಾಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಆರೋಗ್ಯಕರ ಜೀವನಶೈಲಿ ಹಾಗೂ ಆಹಾರ ಪದ್ಧತಿಯ ಪಾಲನೆಯ ಮೂಲಕ ಹೃದಯದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು, ಹೃದಯ ಸಂಬಂಧಿ ಕಾಯಿಲೆಗಳು ತಡೆಗಟ್ಟುವಿಕೆಯ ಬಗ್ಗೆ ವಿಶ್ವದಾದ್ಯಂತ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಈ ದಿನ ಹಮ್ಮಿಕೊಳ್ಳಲಾಗುತ್ತದೆ.