ಬೆಂಗಳೂರು: ಲೋವರ್ ಆಗರಂನಿಂದ ಸರ್ಜಾಪುರವರೆಗೂ ರಸ್ತೆ ಅಗಲೀಕರಣಕ್ಕೆ 12.34 ಎಕರೆ ಜಮೀನನ್ನು ರಕ್ಷಣಾ ಇಲಾಖೆ ಬಿಬಿಎಂಪಿಗೆ ನೀಡಿದ್ದು, ಇನ್ನೂ 10.77 ಎಕರೆ ನೀಡಲು ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಗರದ ಎಎಸ್ಸಿ ಸೆಂಟರ್ ಮತ್ತು ಕಾಲೇಜಿನ ಕಮಾಂಡೆಂಟ್ ಲೆಫ್ಟಿನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಅವರ ಜೊತೆ ಡಿಸಿಎಂ ಅವರು ಇಂದು ವಿಧಾನಸೌಧದಲ್ಲಿ ಸಮಾಲೋಚನೆ ನಡೆಸಿದರು.
ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಜಿ ರಸ್ತೆಯಿಂದ ಬೆಳ್ಳಂದೂರು ಭಾಗಕ್ಕೆ ತೆರಳಲು ಸುಮಾರು 1 ಗಂಟೆ ಸಮಯ ಬೇಕಾಗಿತ್ತು. ಈ ರಸ್ತೆ ನಿರ್ಮಾಣವಾದ ನಂತರ 5-8 ನಿಮಿಷಗಳ ಅಂತರದಲ್ಲಿ ಕ್ರಮಿಸಬಹುದು. ಬೆಳ್ಳಂದೂರು, ಈಜಿಪುರ, ಆಗರಂ ಭಾಗದ ಸಂಚಾರ ದಟ್ಟಣೆಗೆ ಮುಕ್ತಿ ಸಿಗಲಿದೆ. ನಾನು ಹಾಗೂ ಸಿಎಂ ಕೇಂದ್ರ ರಕ್ಷಣಾ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆವು ಎಂದರು.
ಮಾಡ ಹಾಗಲಕಾಯಿ ಬಗ್ಗೆ ಗೊತ್ತಾ.? ಇದರ ಅದ್ಭುತ ಆರೋಗ್ಯ ಪ್ರಯೋಜನ ಕೇಳಿದ್ರೆ ಶಾಕ್ ಆಗ್ತೀರಾ..?
ನಮ್ಮ ಮನವಿಗೆ ಕೇಂದ್ರ ರಕ್ಷಣಾ ಸಚಿವಾಲಯ ಸ್ಪಂದಿಸಿ, ಒಟ್ಟು 22 ಎಕರೆ ಜಾಗವನ್ನು ರಸ್ತೆಗಾಗಿ ಬಿಟ್ಟುಕೊಡಲು ತೀರ್ಮಾನಿಸಿ ಸಹಕಾರ ನೀಡಿದೆ. ಈ ರಸ್ತೆ ನಿರ್ಮಾಣದ ಮೊದಲ ಹಂತದ 3.50 ಕಿ.ಮೀ ಕಾಮಗಾರಿಗೆ 35 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ. ಟ್ರಿನಿಟಿ ಸರ್ಕಲ್, ಈಜಿಪುರ ಸೇರಿದಂತೆ ಒಂದಷ್ಟು ಕಡೆ ನೂತನ ರಸ್ತೆ ನಿರ್ಮಾಣಕ್ಕೆ ಇನ್ನೂ 10.77 ಎಕರೆ ಜಾಗವನ್ನು ರಕ್ಷಣಾ ಇಲಾಖೆ ನೀಡಬೇಕಿದೆ. ಇದರಿಂದ ಐಟಿ ಹಬ್ಗೆ ತೆರಳಲು ಇದ್ದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.
ಈಗಾಗಲೇ ರಕ್ಷಣಾ ಇಲಾಖೆಯವರು 12.34 ಎಕರೆ ಜಾಗವನ್ನು ಬಿಬಿಎಂಪಿಗೆ ಹಸ್ತಾಂತರಿಸಿದ್ದಾರೆ. ಇದಕ್ಕಾಗಿ ನಮಗೆ ಸಹಕಾರ ಕೊಟ್ಟ ಲೆಫ್ಟನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಅವರು ಇದೇ 30 ರಂದು ನಿವೃತ್ತಿಯಾಗುತ್ತಿದ್ದು, ಅವರನ್ನು ನಮ್ಮ ಕಚೇರಿಗೆ ಆಹ್ವಾನಿಸಿ ಅಭಿನಂದಿಸಿದ್ದೇವೆ. ಬೆಂಗಳೂರಿನ ನಾಗರೀಕರಿಗೆ, ವಿಶೇಷವಾಗಿ ಐಟಿ ಹಬ್ಗೆ ತೆರಳುವವರಿಗೆ ಹಾಗೂ ಪೂರ್ವ ಬೆಂಗಳೂರಿಗರಿಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲವಾಗಲಿದೆ ಎಂದಿದ್ದಾರೆ.
ನಾನು ಬೆಂಗಳೂರು ನಗರಭಿವೃದ್ಧಿ ಇಲಾಖೆಯ ಜವಾಬ್ದಾರಿ ತೆಗೆದುಕೊಂಡ ನಂತರ ಬೆಳ್ಳಂದೂರು ಹಾಗೂ ಸುತ್ತಮುತ್ತಲ ಐಟಿ ಹಬ್ ಭಾಗದ ಜನರ ಸಮಸ್ಯೆ ಆಲಿಸಿದ್ದೆ. ಅಲ್ಲಿನ ಸಂಚಾರ ದಟ್ಟಣೆ ವಿಚಾರವಾಗಿ ದಿನನಿತ್ಯ 8-10 ಇ-ಮೇಲ್ಗಳು ನನಗೇ ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ನಾನು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆವು. ಈ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದಂತಾಗಿದೆ ಎಂದು ಹೇಳಿದರು.