ಬೆಂಗಳೂರು: ಚೀನಾ ಮೂಲದ ವ್ಯಕ್ತಿಗಳ ಅಣತಿಯಂತೆ ಆನ್ಲೈನ್ ಜಾಬ್ ಟಾಸ್ಕ್, ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಾಂಶ ನೀಡುವುದಾಗಿ ವಂಚಿಸುತ್ತಿದ್ದ 10 ಜನ ಆರೋಪಿಗಳನ್ನ ಬೆಂಗಳೂರು ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಯಾಹ್ಯಾ, ಉಮರ್ ಫಾರೂಕ್, ಮೊಹಮ್ಮದ್ ಮಹೀನ್, ಮೊಹಮ್ಮದ್ ಮುಜಾಮಿಲ್, ತೇಜಸ್, ಚೇತನ್, ವಾಸೀಂ, ಸೈಯದ್ ಝೈದ್, ಸಾಹಿ ಅಬ್ದುಲ್ ಅನನ್ ಹಾಗೂ ಓಂಪ್ರಕಾಶ್ ಬಂಧಿತರು.
ಆರೋಪಿಗಳ ವಿರುದ್ಧ ವಿವಿಧ ರಾಜ್ಯಗಳಲ್ಲಿ ವಂಚಿಸಿದ್ದ ಆರೋಪದಡಿ ನ್ಯಾಷನಲ್ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ (ಎನ್ಸಿಆರ್ಪಿ) ನಲ್ಲಿ ಒಟ್ಟು 122 ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದರು ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ವ್ಯಕ್ತಿಗಳನ್ನ ಸಂಪರ್ಕಿಸುತ್ತಿದ್ದ ಆರೋಪಿಗಳು, ಮನೆಯಲ್ಲಿಯೇ ಕುಳಿತು ನಾವು ನೀಡುವ ಟಾಸ್ಕ್ಗಳನ್ನ ಆನ್ಲೈನ್ನಲ್ಲಿ ಪೂರ್ಣಗೊಳಿಸಿದರೆ ಹಣ ನೀಡುವುದಾಗಿ ನಂಬಿಸುತ್ತಿದ್ದರು.
Condoms: ಸೆಕ್ಸ್ ಎಂಜಾಯ್ ಮಾಡಲು ಕಾಂಡೋಮ್ ಆಯ್ಕೆ ಹೇಗಿರಬೇಕು ಗೊತ್ತಾ..?
ಒಪ್ಪಿಗೆ ಸೂಚಿಸುವವರನ್ನ ತಮ್ಮದೇ ಆದ ಟೆಲಿಗ್ರಾಂ ಗ್ರೂಪ್ಗೆ ಸೇರಿಸಿ, ಆರಂಭದಲ್ಲಿ ನಾವು ಹೇಳುವ ಕೆಲ ಐಷಾರಾಮಿ ಹೋಟೆಲ್ಗಳಿಗೆ ರಿವ್ಯೂಗಳನ್ನ ನೀಡಬೇಕು. ಮತ್ತು ಈ ರೀವ್ಯೂಗಳನ್ನ ನೀಡುವ ಸಮಯದಲ್ಲಿ ನೀವು 150-200 ರೂ. ಪಾವತಿಸಿ ರಿವ್ಯೂ ರಿಪೋರ್ಟ್ ನೀಡಿದರೆ ಲಾಭಾಂಶ ನೀಡುತ್ತೇವೆ ಎನ್ನುತ್ತಿದ್ದರು.
ಅದೇ ರೀತಿ ಆರಂಭದಲ್ಲಿ ಪ್ರತೀ ರಿವ್ಯೂಗೆ 400-500 ರೂಪಾಯಿ ಹಣವನ್ನ ಆನ್ಲೈನ್ ಮೂಲಕ ಪಾವತಿಸುತ್ತಿದ್ದರು. ಈ ರೀತಿ ಹಲವು ರಿವ್ಯೂ ರಿಪೋರ್ಟ್ಗಳನ್ನ ತರಿಸಿಕೊಂಡು ಹಣ ಪಾವತಿಸಿ ನಂಬಿಕೆ ಗಳಿಸಿಕೊಂಡ ಬಳಿಕ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ನಲ್ಲಿ ಹೆಚ್ಚು ಹಣ ಹೂಡಿಕೆ ಮಾಡಿದರೆ ಇನ್ನೂ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸುತ್ತಿದ್ದರು. ನಂಬಿದವರು ಹಣ ಹೂಡಿಕೆ ಮಾಡಿದ ಬಳಿಕ ಸಂಪರ್ಕಕ್ಕೆ ಸಿಗದೆ ವಂಚಿಸುತ್ತಿದ್ದರು. ಇದೇ ರೀತಿ ವ್ಯಕ್ತಿಯೊಬ್ಬರಿಗೆ 25.37 ಲಕ್ಷ ರೂ. ವಂಚಿಸಿದ್ದ ಆರೋಪಿಗಳ ವಿರುದ್ಧ ಉತ್ತರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಹಣ ಸಂದಾಯವಾಗಿರುವ ಬ್ಯಾಂಕ್ ಖಾತೆಗಳ ವಿವರ ಹಾಗೂ ಆ ಖಾತೆಗಳಿಂದ ಬೆಂಗಳೂರಿನ ವಿವಿಧ ಎಟಿಎಂಗಳಲ್ಲಿ ವಿತ್ ಡ್ರಾ ಆಗಿರುವುದನ್ನ ಪತ್ತೆಹಚ್ಚಿದ್ದರು. ಅದರನ್ವಯ 7 ಜನ ಆರೋಪಿಗಳನ್ನ ಆರ್.ಟಿ.ನಗರದ ಬಳಿ ಬಂಧಿಸಿ ವಿಚಾರಣೆ ನಡೆಸಿದಾಗ, ಆರೋಪಿಗಳ ಪೈಕಿ ಇನ್ನೂ ಮೂವರು ಚೀನಾಗೆ ತೆರಳಿರುವುದು ಹಾಗೂ ಚೀನಾ ಮೂಲದ ವ್ಯಕ್ತಿಗಳ ಸೂಚನೆಯಂತೆ ವಂಚನೆಯಲ್ಲಿ ತೊಡಗಿರುವುದನ್ನ ಬಾಯ್ಬಿಟ್ಟಿದ್ದರು. ಸೆ.15ರಂದು ಚೀನಾದಿಂದ ಬಂದಿಳಿದ ಮೂವರೂ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಒಟ್ಟು 10 ಜನರನ್ನೂ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.