ಗಾಂಧಿನಗರದಲ್ಲಿ ಹಿಟ್ ಸಿನಿಮಾಗಳು ಒಂದರ ನಂತರ ಒಂದರಂತೆ ತೆರೆಕಾಣುತ್ತಿವೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾಗಳು ರೀರಿಲೀಸ್ ನಲ್ಲೂ ಉತ್ತಮ ಗಳಿಕೆ ಕಂಡಿವೆ.
ತೆಲುಗು ಚಿತ್ರರಂಗದಂತೆ ಕನ್ನಡದಲ್ಲಿ ಸ್ಟಾರ್ ನಟರ ಸಿನಿಮಾಗಳ ರೀ-ರಿಲೀಸ್ ಮಾಡುವ ಟ್ರೆಂಡ್ ಶುರುವಾಗಿದೆ. ಸ್ಟಾರ್ ನಟರಾದ ದಿ. ಪುನೀತ್ ರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾಗಳು ರೀ ರಿಲೀಸ್ ಆಗುವುದರ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿವೆ.
ರೀ ರಿಲೀಸ್ ಆಗಿರುವ ಸಿನಿಮಾಗಳು ಇತ್ತೀಚೆಗೆ ಬಿಡುಗಡೆಯಾಗಿರುವ ಸಿನಿಮಾಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಗಮನ ಸೆಳೆಯುತ್ತಿವೆ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದ ಅಂಗವಾಗಿ ರೀ ರಿಲೀಸ್ ಆದ ಜಾಕಿ ಸಿನಿಮಾ ಎರಡು ವಾರಗಳ ಪ್ರದರ್ಶನ ಕಾಣುವ ಮೂಲಕ ಬರೋಬ್ಬರಿ 2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಜಾಕಿ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 2 ಕೋಟಿ ಕಲೆಕ್ಷನ್ ಆಯಿತೋ, ಅಂಜನಿಪುತ್ರ ಚಿತ್ರದ ನಿರ್ಮಾಪಕ ಎನ್ ಕುಮಾರ್ ಕೂಡಾ ತಮ್ಮ ಚಿತ್ರವನ್ನು ರೀ ರಿಲೀಸ್ ಮಾಡಿದರು. ಈ ಸಿನಿಮಾ ಒಂದು ವಾರಕ್ಕೆ 50 ಲಕ್ಷ ರೂ. ಕಲೆಕ್ಷನ್ ಮಾಡಿತ್ತು. ಬಳಿಕ, ಪುನೀತ್ ಅಭಿನಯದ ಪವರ್ ಚಿತ್ರ ರೀ ರಿಲೀಸ್ ಆಗಿ 40 ಲಕ್ಷ ರೂಪಾಯಿ ಗಳಿಸಿತ್ತು.
ದರ್ಶನ್ ಅಭಿನಯದ ಕರಿಯ ಹಾಗೂ ರಾಬರ್ಟ್ ನಿರ್ಮಾಪಕರಿಂದ ಕೆಲ ವಿತರಕರು ಬಿಡುಗಡೆಗೆ ಅನುಮತಿ ಪಡೆದು ಒಳ್ಳೆ ಗಳಿಕೆ ಮಾಡಿಕೊಂಡಿದ್ದಾರೆ. ರಾಬರ್ಟ್ ಸಿನಿಮಾ ರೀ ರಿಲೀಸ್ ಆಗಿ ಒಂದು ವಾರಕ್ಕೆ 40 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ.
2003ರಲ್ಲಿ ಬಿಡುಗಡೆ ಆಗಿ ದರ್ಶನ್ ಹಾಗೂ ನಿರ್ದೇಶಕ ಪ್ರೇಮ್ ಅವರಿಗೆ ಹೆಸರು ತಂದುಕೊಟ್ಟ ಚಿತ್ರ ‘ಕರಿಯ’. ರೌಡಿಸಂ ಕಥೆ ಆಧರಿಸಿದ ಕರಿಯ ಸಿನಿಮಾದಲ್ಲಿ ರಿಯಲ್ ರೌಡಿಗಳು ಅಭಿನಯಿಸುವುದರ ಜೊತೆಗೆ ದರ್ಶನ್ ಸಿನಿಮಾ ಕೆರಿಯರ್ಗೆ ದೊಡ್ಡ ಬ್ರೇಕ್ ನೀಡಿತ್ತು. ಈ ಚಿತ್ರ ಆಗಸ್ಟ್ 30 ರಂದು ಮರು ಬಿಡುಗಡೆ ಆಗುವುದರ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ 35 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು.
ಇದಕ್ಕೂ ಮುನ್ನ ಉಪೇಂದ್ರ ಅಭಿನಯಿಸಿ ನಿರ್ದೇಶನ ಮಾಡಿದ್ದ “ಎ” ಸಿನಿಮಾ ಕೂಡ ಮೇ ತಿಂಗಳಲ್ಲಿ ರೀ ರಿಲೀಸ್ ಆಗಿತ್ತು. ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಎ ಸಿನಿಮಾ ಕೂಡ ಒಂದು ಅನ್ನೋದು ಸಿನಿ ಪ್ರೇಮಿಗಳ ಅಭಿಪ್ರಾಯ. ಚಿತ್ರ ಒಂದು ವಾರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ 60 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು.