ನಿವೃತ್ತಿಯ ಅಂಚಿನಲ್ಲಿರುವ ವೆಸ್ಟ್ ಇಂಡೀಸ್ ತಂಡದ ದೈತ್ಯ ಆಲ್ರೌಂಡರ್ ಆಂಡ್ರೆ ರಸೆಲ್, 2026ರಲ್ಲಿ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಬಯಕೆ ಹೊರಹಾಕಿದ್ದಾರೆ. ವೆಸ್ಟ್ ಇಂಡೀಸ್ ಮತ್ತುಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆದ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ನಂತರ ಆಂಡ್ರೆ ರಸೆಲ್ ನಿವೃತ್ತಿ ತೆಗೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಈ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ರಸೆಲ್, ಇನ್ನೆರಡು ವರ್ಷ ಆಟ ಮುಂದುವರಿಸಲು ನಿರ್ಧಾರ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ತಂಡದ ನೂತನ ಕೋಚ್ ಡರ್ರೆನ್ ಸಾಮಿ ಜೊತೆಗೆ ಮಾತನಾಡಿದ ಬಳಿಕ ತಮ್ಮ ನಿವೃತ್ತಿ ನಿರ್ಧಾರದಲ್ಲಿ ಬದಲಾವಣೆ ತಂದುಕೊಂಡಿದ್ದಾರೆ ದೈತ್ಯ ಆಲ್ರೌಂಡರ್ ಹೇಳಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ದಶಕಕ್ಕೂ ಹೆಚ್ಚು ಸಮಯ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಆಡಿ, ಕೆಕೆಆರ್ಗೆ ಮೂರು ಬಾರಿ ಟ್ರೋಫಿ ಗೆಲ್ಲುವಂತೆ ಮಾಡಲು ಪ್ರಮುಖ ಪಾತ್ರ ವಹಿಸಿದ್ದ ರೆಸೆಲ್, ಈಗ ವೆಸ್ಟ್ ಇಂಡೀಸ್ ತಂಡಕ್ಕೆ ಮತ್ತೆ ಟಿ20 ವಿಶ್ವ ಚಾಂಪಿಯನ್ಷಿಪ್ ಗೆದ್ದುಕೊಡುವ ಗುರಿ ಹೊಂದಿದ್ದಾರೆ.
“ಕೋಚ್ ಡರ್ರೆನ್ ಸಾಮಿ ಜೊತೆಗೆ ಮಾತನಾಡಿದ್ದೇನೆ. ಇನ್ನೆರಡು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮುಂದುವರಿಯುವಂತೆ ಅವರು ಸಲಹೆ ನೀಡಿದ್ದಾರೆ. ಇನ್ನು ಕೆರಿಬಿಯನ್ನಲ್ಲಿ ಈಗ ಹೊಸ ಪ್ರತಿಭಾನ್ವಿತ ಆಟಗಾರರು ಬರುತ್ತಿದ್ದಾರೆ. ಇನ್ನೆರಡು ವರ್ಷಗಳ ಕಾಲ ನಾನು ಈ ಯುವ ಪ್ರತಿಭೆಗಳೊಂದಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳು ಪೈಪೋಟಿ ನಡೆಸುತ್ತೇನೆ,” ಎಂದು ರಸೆಲ್ ಹೇಳಿರುವುದಾಗಿ ಜಮೈಕಾ ಗ್ಲೆನರ್ ವರದಿ ಮಾಡಿದೆ.