ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಣ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಸೆ.27ರಂದು (ಶುಕ್ರವಾರ) ಶುರುವಾಗಬೇಕಿದ್ದು, ಇದಕ್ಕೂ ಮೊದಲೇ ಬಾಂಗ್ಲಾ ತಂಡದ ಸ್ಟಾರ್ ಆಲ್ರೌಂಡರ್ ಹಾಗೂ ಮಾಜಿ ನಾಯಕ ಶಕಿಬ್ ಅಲ್ ಹಸನ್ ನಿವೃತ್ತಿ ಘೋಷಿಸಿದ್ದಾರೆ.
ಸರಣಿಯ ಮೊದಲ ಪಂದ್ಯದಲ್ಲ 280 ರನ್ಗಳ ಹೀನಾಯ ಸೋಲುಂಡು ಈಗಾಗಲೇ 0-1 ಅಂತರದ ಹಿನ್ನಡೆಯಲ್ಲಿರುವ ಬಾಂಗ್ಲಾದೇಶ ತಂಡಕ್ಕೆ ಈಗ ದೊಡ್ಡ ಹಿನ್ನಡೆ ಎದುರಾಗಿದೆ. ಕಾನ್ಪುರ ಟೆಸ್ಟ್ ಪಂದ್ಯ ಆರಂಭಕ್ಕೂ ಹಿಂದಿನ ದಿನವಾದ ಗುರುವಾರ (ಸೆ.26) ಮಾತನಾಡಿರುವ ಶಕಿಬ್ ಅಲ್ ಹಸನ್ ಮುಂದಿನ 3 ತಿಂಗಳ ಅವಧಿಯಲ್ಲಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ತೆಗೆದುಕೊಳ್ಳುವುದಾಗಿ ಬಾಂಬ್ ಸಿಡಿಸಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿಬದುಕಿಗೆ ಈ ಕೂಡಲೇ ಜಾರಿಗೆ ಬರುವಂತೆ ನಿವೃತ್ತಿ ಹೇಳಿರುವ ಶಕಿಬ್ ಅಲ್ ಹಸನ್, ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಅಂತಿಮ ಪಂದ್ಯ ಆಡುವ ಬಯಕೆ ಹೊರಹಾಕಿದ್ದಾರೆ. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧ ಆಡಬೇಕಾದರೆ ಬಾಂಗ್ಲಾದೇಶದಿಂದ ಸುರಕ್ಷಿತವಾಗಿ ಕುಟುಂಬ ಸಮೇತರಾಗಿ ಹೊರಬರುವ ಭರವಸೆ ನೀಡಿದರೆ ಮಾತ್ರ ಆಡುವುದಾಗಿ ಹೇಳಿದ್ದು, ಇಲ್ಲದಿದ್ದರೆ ಟೀಮ್ ಇಂಡಿಯಾ ವಿರುದ್ಧ ಕಾನ್ಪುರದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯ ತಮ್ಮ ವೃತ್ತಿಬದುಕಿನ ಕೊನೇ ಪಂದ್ಯ ಆಗಲಿದೆ ಎಂದು ಶಕಿಬ್ ಹೇಳಿಕೊಂಡಿದ್ದಾರೆ.
“ಖಂಡಿತಾ ಬಾಂಗ್ಲಾದೇಶ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇನ್ನು ಆಡುವುದಿಲ್ಲ. ಭಾರತ ವಿರುದ್ಧದ ಮುಂಬರುವ ಟಿ20 ಸರಣಿಯಲ್ಲಿ ಆಡುವುದಕ್ಕೆ ನನಗೆ ಯಾವ ಕಾರಣಗಳೂ ಉಳಿದಿಲ್ಲ. ಈಗ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ಸಮಯ ಬಂದಾಗಿದೆ. ಭಾರತ, ವೆಸ್ಟ್ ಇಂಡೀಸ್ ನಂತರ ಕೆಲ ಸರಣಿಗಳಲ್ಲಿ ಮಾತ್ರವೇ ಆಡುತ್ತೇನೆ. ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಸಿಬಿ) ಈಗಿಂದಲೇ 2026ರ ಸಾಲಿನ ಟಿ20 ವಿಶ್ವಕಪ್ ಕಡೆಗೆ ಗಮನ ನೀಡಿದರೆ ಅದುವೇ ಬಹುದೊಡ್ಡ ಹಾಗೂ ಪರಿಣಾಮಕಾರಿ ನಿರ್ಧಾರ ಆಗಲಿದೆ. ನನ್ನ ನಿವೃತ್ತಿ ತೀರ್ಮಾನ ಅಂತಿಮ. ಬೋರ್ಡ್ ಜೊತೆಗೆ ಚರ್ಚೆ ಮಾಡಿಯೇ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ವಿಶ್ವಕಪ್ ಕಪ್ ಪಂದ್ಯವೇ ನನ್ನ ಕಟ್ಟ ಕಡೆಯ ಪಂದ್ಯ,” ಎಂದಿದ್ದಾರೆ.