ಹುಬ್ಬಳ್ಳಿ: ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಕೈಗೊಂಡಿರುವ ಪೆನ್ ಡ್ರಾಪ್ ಹಾಗೂ ಆಪ್ ನಲ್ಲಿ ಕೆಲಸ ಸ್ಥಗಿತಗೊಳಿಸಿ ನಡೆಸುತ್ತಿರುವ ಧರಣಿಗೆ ಗುರುವಾರ ನಗರದಲ್ಲಿಯೂ ಬೆಂಬಲ ನೀಡಲಾಯಿತು. ಇಲ್ಲಿಯ ತಾಲೂಕು ಆಡಳಿತ ಸೌಧದ ಎದುರು ಕಂದಾಯ ಇಲಾಖೆ ನೌಕರರ ಸಂಘದ ವತಿಯಿಂದ ಕೆಲಕಾಲ ಧರಣಿ ನಡೆಸಲಾಯಿತು.
ಧಾರವಾಡ ಗ್ರಾಮ ಆಡಳಿತ ಅಧಿಕಾರಿಗಳ ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಪರಮಾನಂದ ಶಿವಳ್ಳಿಮಠ ಮಾತನಾಡಿ, ಹೋರಾಟಕ್ಕೆ ಬೆಂಬಲ ನೀಡಲಾಗುವುದು. ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿದರು. ಐ.ಎಫ್. ಅಯ್ಯನಗೌಡ್ರ, ಶಿರಸ್ತೇದಾರರಾದ ಬಾಲಚಂದ್ರ ಹೊಂಗಲ್, ಪಠಾಣ್, ಚಕ್ರಸಾಲಿ ಹಾಗೂ ಇಲಾಖೆ ಸಿಬ್ಬಂದಿ, ಗ್ರೇಡ್ 2 ತಹಶೀಲ್ದಾರ್ ಜಿ.ವಿ. ಪಾಟೀಲ ಅವರು ಬೆಂಬಲ ನೀಡಿದರು.
ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ ವಸ್ತ್ರದ, ಉಪಾಧ್ಯಕ್ಷ ನಿಂಗಪ್ಪ ಮುದ್ದಾಪುರ, ಜಿಲ್ಲಾಧ್ಯಕ್ಷ ಬ್ರಿಜೇಶ ಬಜೆಗಣ್ಣವರ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಪಮ್ಮಾರ ಇತರರು ಪ್ರತಿಭಟನೆಯಲ್ಲಿದ್ದರು.
ಅಧಿಕಾರಿಗಳು ಹಾಗೂ ನೌಕರರು ನಿರ್ವಹಿಸುತ್ತಿರುವ ತಂತ್ರಾಂಶಗಳಾದ ಸಿಸಿಇ, ನಮೋದಯ, ಸಂಯೋಜನೆ, ಕೃಷಿ ಗಣತಿ, ಆಧಾರ್ ಸೀಡ್, ಲ್ಯಾಂಡ್ ಬೀಟ್, ಪೌತಿ ಆಂದೋಲನ, ಪರಿಹಾರ, ಹಕ್ಕು ಪತ್ರ, ಬಗರ್ ಹುಕುಂ, ಬೆಳೆ ಸರ್ವೆ, ದಿಶಾಂಕ, ಭೂಮಿ ಮುಂತಾದ ಮೊಬೈಲ್ ಮತ್ತು ಕಂಪ್ಯೂಟರ್ ಮತ್ತು ಇಂಟರರ್ನೆಟ್ ಆಧಾರಿತ ಕೆಲಸ ನಿರ್ವಹಿಸಲು ಸರ್ಕಾರ ಯಾವುದೇ ಮೂಲ ಸೌಕರ್ಯ ನೀಡುತ್ತಿಲ್ಲ. ಆದರೆ, ಪ್ರಗತಿ ಸಾಧಿಸಲು ನಮ್ಮದು ತಾಂತ್ರಿಕ ಹುದ್ದೆ ಅಲ್ಲದಿದ್ದರೂ ಒತ್ತಡ ಹಾಕುತ್ತಾರೆ ಎಂದು ಪ್ರತಿಭಟನಾಕಾರರು ದೂರಿದರು.