ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿಯಿಂದ ಬಂಧನಕ್ಕೊಳಪಟ್ಟಿದ್ದ ತಮಿಳುನಾಡು ಮಾಜಿ ಸಚಿವ ವಿ ಸೆಂಥಿಲ್ ಬಾಲಾಜಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ನ್ಯಾ.ಎಎಸ್ ಓಕಾ ಮತ್ತು ಎಜಿ ಮಸಿಹ್ ಅವರನ್ನೊಳಗೊಂಡ ಪೀಠವು ಜಾಮೀನು ಮಂಜೂರು ಮಾಡಿದೆ.
ಫೆಬ್ರವರಿ 28 ರಂದು ಮದ್ರಾಸ್ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ ನಂತರ ಸೆಂಥಿಲ್ ಬಾಲಾಜಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇ.ಡಿ ಪರವಾಗಿ ಮತ್ತು ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಸಿದ್ಧಾರ್ಥ್ ಲೂತ್ರಾ ಸೆಂಥಿಲ್ ಬಾಲಾಜೀ ಪರ ವಾದ ಮಂಡಿಸಿದ್ದರು. ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಆಗಸ್ಟ್ 12ರಂದು ಕಾಯ್ದಿರಿಸಿತ್ತು.
Lucky Plants: ನವರಾತ್ರಿಯಲ್ಲಿ ಈ ಗಿಡಗಳನ್ನು ಮನೆಯಲ್ಲಿ ನೆಟ್ಟರೆ ಹಣ ನಿಮ್ಮನ್ನು ಹುಡುಕಿಕೊಂಡು ಬರುವುದು..!
ಬಾಲಾಜಿ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್, ಈ ರೀತಿಯ ಪ್ರಕರಣದಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಅದು ತಪ್ಪು ಸಂಕೇತವನ್ನು ನೀಡುತ್ತದೆ. ಸಾರ್ವಜನಿಕ ಹಿತಾಸಕ್ತಿ ವಿರುದ್ಧವಾಗಿರುತ್ತದೆ. ಅರ್ಜಿದಾರರು ಎಂಟು ತಿಂಗಳಿಗೂ ಹೆಚ್ಚು ಕಾಲ ಕಸ್ಟಡಿಯಲ್ಲಿರುವುದರಿಂದ ಕಾಲಮಿತಿಯೊಳಗೆ ಪ್ರಕರಣವನ್ನು ವಿಲೇವಾರಿ ಮಾಡುವಂತೆ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡುವುದು ಸೂಕ್ತ ಎಂದು ಹೇಳಿತ್ತು.
ಎಐಎಡಿಎಂಕೆ ಆಡಳಿತದಲ್ಲಿ ಸಾರಿಗೆ ಸಚಿವರಾಗಿದ್ದಾಗ ಬಸ್ ಕಂಡಕ್ಟರ್ಗಳ ನೇಮಕಾತಿ ಮತ್ತು ಚಾಲಕರು ಮತ್ತು ಜೂನಿಯರ್ ಎಂಜಿನಿಯರ್ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದ್ದು, ಉದ್ಯೋಗಕ್ಕಾಗಿ ನಗದು ಪಡೆದು ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ಬಾಲಾಜಿ ಅವರನ್ನು ಇ.ಡಿ ಬಂಧಿಸಿತ್ತು. ಬಂಧನಕ್ಕೊಳಗಾದ ಎಂಟು ತಿಂಗಳ ನಂತರ ಫೆಬ್ರವರಿ 13ರಂದು ತಮಿಳುನಾಡು ಸಚಿವ ಸಂಪುಟಕ್ಕೆ ಬಾಲಾಜಿ ರಾಜೀನಾಮೆ ನೀಡಿದರು.
ಉದ್ಯೋಗ ಆಕಾಂಕ್ಷಿಗಳಿಂದ ಲಂಚ ಸ್ವೀಕರಿಸಲು ಮಾಜಿ ಸಚಿವರು ತಮ್ಮ ಸಹೋದರ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಇ.ಡಿ ಸೆಂಥಿಲ್ ಬಾಲಾಜಿ ವಿರುದ್ಧ 3,000 ಪುಟಗಳ ಆರೋಪಪಟ್ಟಿ ಸಲ್ಲಿಸಿತ್ತು.