ಹುಬ್ಬಳ್ಳಿ:- ಹುಬ್ಬಳ್ಳಿ ಇಎಸ್ಐ ಆಸ್ಪತ್ರೆ ಆಡಳಿತ ಮಂಡಳಿ ಮತ್ತೆ ವಿವಾದಾತ್ಮಕ ನಡೆಯಿಂದ ಸುದ್ದಿಯಾಗಿದೆ. ಆಸ್ಪತ್ರೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಹುಬ್ಬಳ್ಳಿ-ಕಾರವಾರ ರಸ್ತೆಯಲ್ಲಿರುವ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆಅವಕಾಶ ನೀಡಲಾಗಿತ್ತು. ಆದರೆ, ಈ ಬಾರಿ ಮೂರ್ತಿ ಪ್ರತಿಷ್ಠಾಪನೆ ಅವಕಾಶ ನೀಡದ ಹಿನ್ನೆಲೆ, ಆಸ್ಪತ್ರೆ ಆವರಣದಲ್ಲಿದ್ದ ಶಾಶ್ವತ ಮೂರ್ತಿಗೆ ಪೂಜೆ ನಡೆಸಲಾಗುತ್ತಿತ್ತು. ಇದಕ್ಕೆ ಆಸ್ಪತ್ರೆ ಮುಖ್ಯಸ್ಥ ಯೂನಿಸ್ ನಜ್ಮಿ ಕಾರಣ, ಅವರು ಮುಸ್ಲಿಂ ಎನ್ನುವ ಕಾರಣಕ್ಕೆ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿಲ್ಲ ಎಂಬ ಆರೋಪ ಸಹ ಕೇಳಿ ಬಂದಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ, ಹಿಂದೂಪರ ಸಂಘಟನೆಗಳು, ಬಿಜೆಪಿ ಸದಸ್ಯರು ಆಸ್ಪತ್ರೆಗೆ ನುಗ್ಗಿ ತಾವೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿದ್ದರು. ಅಲ್ಲದೆ ಅಧೀಕ್ಷಕ ನಜ್ಮಿಗೆ ತರಾಟೆಗೆ ತೆಗೆದುಕೊಂಡಿದ್ದರು.
ಬಳಿಕ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಸಿಗೊಳಿಸಿದ್ದರು. ಇದಾದ ಬಳಿಕ ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ. ಈಗ ಆಸ್ಪತ್ರೆ ಅಧೀಕ್ಷಕ ನಜ್ಮಿ ಮತ್ತೊಂದು ವರ್ತನೆ ತೋರಿದ್ದಾರೆ. ಹಿಂದೂಪರ ಸಂಘಟನೆಗಳ ಜೊತೆ ಸೇರಿ ಹಬ್ಬ ಮಾಡಿರುವ ಸಿಬ್ಬಂದಿ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಮಯದಲ್ಲಿ ಕೋಮು ಗಲಭೆಯ ಸೃಷ್ಟಿಸುವ ಪ್ರಯತ್ನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರದ ಸಿಬ್ಬಂದಿಯಾಗಿ ಹಿಂದೂಪರ ಸಂಘಟನೆಗಳ ಜೊತೆಗೆ ಸೇರಿ ಗಣೇಶ ಮೂರ್ತಿ ಕೂರಿಸಿದ್ದಿರಿ, ನಿಮ್ಮ ಮೇಲೆ ಯಾಕೆ ಕ್ರಮವಾಗಬಾರದು ಎಂದು ಶುಶ್ರೂಷಾಧಿಕಾರಿಗೆ ಜಗದೀಶ್ ಹೆಚ್ ಎನ್ನುವರಿಗೆ ಈ ತಿಂಗಳ 20 ರಂದು ನೋಟಿಸ್ ನೀಡಲಾಗಿದ್ದು, ಏಳು ದಿನ ಉತ್ತರ ನೀಡಲು ಅವಕಾಶ ನೀಡಲಾಗಿದೆ.
ಈ ವಿಷಯ ಹೊರಗಡೆ ಬಾರದ್ದಂತೆ ಎಚ್ಚರಿಕೆ ಸಹ ನೀಡಲಾಗಿದೆಯಂತೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಅಧೀಕ್ಷಕ ನಜ್ಮಿ ಸಂಪರ್ಕಿಸಿದಾಗ, ‘ಇದು ನಮ್ಮ ಆಡಳಿತಾತ್ಮಕ ವಿಷಯ, ನಮ್ಮ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದೇ ನೋಟಿಸ್ ನೀಡಲಾಗಿದೆ ಎಂದು ಸಮರ್ಥನೆ ಮಾಡಿಕೊಳ್ಳತ್ತಾರೆ.
ಇನ್ನು ಈ ನೋಟಿಸ್ ವಿಚಾರ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಶಾಸಕ ಅಧಿಕಾರಿಯನ್ನು ಏಕವಚನದಲ್ಲಿ ತರಾಟೆಗೆ ತಗೆದುಕೊಂಡಿದ್ದಾರೆ.