ಬೆಂಗಳೂರು:- ಸತತ ಏರಿಕೆ ಕಂಡಿದ್ದ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದೆ. ಇದರಿಂದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ.
ರಾಜ್ಯದಲ್ಲಿ ಮಳೆಯಾಗುತ್ತಿರುವ ಪರಿಣಾಮ ಒಂದು ತಿಂಗಳಿನಿಂದ ಈರುಳ್ಳಿ ಬೆಲೆ ಏರಿಕೆಯಾಗಿತ್ತು. ಸದ್ಯ ಒಂದು ಕೆಜಿ ಈರುಳ್ಳಿಗೆ 60 ರಿಂದ 70 ರೂಪಾಯಿ ನಿಗದಿಯಾಗಿದೆ. ಈ ಬೆಲೆ ಏರಿಕೆಯಿಂದಾಗಿ ಗ್ರಾಹಕರು ರೋಸಿ ಹೋಗಿದ್ದರು. ಇದೀಗ ಎನ್ಸಿಸಿಎಫ್ನಿಂದ ಸದ್ಯ ಕಡಿಮೆ ಬೆಲೆಗೆ ಈರುಳ್ಳಿಯನ್ನು ವಿತರಣೆ ಮಾಡಾಲಾಗುತ್ತಿದ್ದು, ಸಾಕಷ್ಟು ಗ್ರಾಹಕರು ಖುಷಿಯಿಂದ ಈರುಳ್ಳಿಯನ್ನ ಖರೀದಿ ಮಾಡುತ್ತಿದ್ದಾರೆ.
ಹೌದು. ಕೇಂದ್ರ ಸರಕಾರವು ಬೆಲೆ ಸ್ಥಿರೀಕರಣ ನಿಧಿ ಅಡಿ 550 ಉತ್ಪನ್ನಗಳನ್ನು ಗುರುತಿಸಿದ್ದು, ಯಾವ ಉತ್ಪನ್ನದ ಬೆಲೆ ಮಾರುಕಟ್ಟೆಯಲ್ಲಿ ದುಬಾರಿಯಾಗುತ್ತದೋ ಅಂತಹ ಉತ್ಪನ್ನವನ್ನು ಸಂಗ್ರಹಿಸಿ, ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಬೆಲೆ ಇಳಿಕೆಗೆ ಸಹಕಾರಿಯಾಗುವ ಮೂಲಕ ಗ್ರಾಹಕರಿಗೆ ಉಂಟಾಗುವ ಹೊರೆಯನ್ನು ಇಳಿಸಲಾಗುತ್ತಿದೆ.
ಅದೇ ರೀತಿ ಇದೀಗ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ದರ 70 ರೂ.ಗೆ ತಲುಪಿದೆ. ಅದರಲ್ಲಿ ಸಣ್ಣ ಗಾತ್ರದ, ಗುಣಮಟ್ಟವಲ್ಲದ ಈರುಳ್ಳಿ 40-50 ರೂ.ಗೆ ಲಭ್ಯವಾಗುತ್ತಿವೆ. ಹೀಗಾಗಿ ಮಹಾರಾಷ್ಟ್ರ, ಮಧ್ಯಪ್ರದೇಶದಿಂದ ಗುಣಮಟ್ಟದ ಈರುಳ್ಳಿಯನ್ನು ಖರೀದಿಸಿ, ದೇಶದ ಮೆಟ್ರೋ ಸಿಟಿಗಳಲ್ಲಿ ವಿತರಣೆ ಮಾಡಲು ಆರಂಭಿಸಿದೆ.
ಅದೇ ರೀತಿ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರದಿಂದ ಕೆಜಿ ಗೆ 35 ರೂ. ಯಂತೆ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗುವವರೆಗೆ ಮಾರಾಟ ಮುಂದುವರಿಯಲಿದೆ.